Tuesday, May 30, 2017

ಗೋಣಿಕೊಪ್ಪ ಪೊಲೀಸರ ಕಾರ್ಯಾಚರಣೆ;

ಅಂತರ್ ಜಿಲ್ಲಾ ಕಳ್ಳರ ಬಂಧನ


ಸತೀಶ್ ಯಾನೆ ರಂಗಪ್ಪ
                ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಪ್ರಮುಖ ವಾಣಿಜ್ಯ ಕೇಂದ್ರಗಳಾದ ಮಡಿಕೇರಿ, ಮೂರ್ನಾಡು , ನಾಪೋಕ್ಲು, ಗೋಣಿಕೊಪ್ಪ, ಪೊನ್ನಂಪೇಟೆ, ತಿತಿಮತಿ, ಕುಶಾಲನಗರ, ಸಿದ್ದಾಪುರ, ನೆಲ್ಲಿಹುದಿಕೇರಿಗಳಲ್ಲಿ ರಾತ್ರಿ ವೇಳೆ ವಾಣಿಜ್ಯ ಮಳಿಗೆಗಳ ಶೆಟರ್ಸ್ ಅನ್ನು ಎತ್ತಿ ಒಳನುಗ್ಗಿ ಸರಣಿ ಕಳ್ಳತನವನ್ನು ಮಾಡುವ ಮೂಲಕ ಸಾರ್ವಜನಿಕರಲ್ಲಿ ಅದರಲ್ಲೂ ವಿಶೇಷವಾಗಿ ವರ್ತಕರಲ್ಲಿ ಆತಂಕ ಮೂಡಿಸಿ ಜಿಲ್ಲಾ ಪೊಲೀಸರಿಗೆ ಸವಾಲಾಗಿದ್ದ  ಮೂವರು ಕುಖ್ಯಾತ ಅಂತರ್ ಜಿಲ್ಲಾ ಕಳ್ಳರನ್ನು ಗೋಣಿಕೊಪ್ಪ ಪೊಲೀಸ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕಾಶ್ ಸಿದ್ದೇಶ್ ತಳವಾರ್
             ಬಂಧಿತ ಆರೋಪಿಗಳನ್ನು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗೊಲ್ಲರಹಟ್ಟಿ ಗ್ರಾಮದ ಆರ್‌ ಸತೀಶ್‌ ಯಾನೆ ರಂಗಪ್ಪ ಯಾನೆ ಚಾಲಾಕಿ ರಂಗಪ್ಪ, ವಿಜಯಪುರ ಜಿಲ್ಲೆಯ ನಿಡಗುಂಡಿ ತಾಲೂಕಿನ ಹುಲ್ಲೂರು ಗ್ರಾಮದ ಪ್ರಕಾಶ್‌ ಸಿದ್ದಪ್ಪ ತಳವಾರ್ ಹಾಗೂ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಯ್ಯಂಡಾಣೆ ಬಳಿಯ ಕೋಕೇರಿ ಗ್ರಾಮದ ಚೇನಂಡ ಮುತ್ತಪ್ಪ ಎಂದು ಗುರುತಿಸಲಾಗಿದೆ.

ಚೇನಂಡ ಮುತ್ತಪ್ಪ  
            ಬಂಧಿತ ಆರೋಪಿಗಳ ಪೈಕಿ  ಸತೀಶ್ ಯಾನೆ ಚಾಲಾಕಿ ರಂಗಪ್ಪ ಹಾಗೂ ಪ್ರಕಾಶ್ ಸಿದ್ದಪ್ಪ ತಳವಾರ್‌ ರವರುಗಳನ್ನು 2015 ಜುಲೈ ತಿಂಗಳಿನಲ್ಲಿ ಬಿಳಿಕೆರೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಮಾರು 12 ವಾಣಿಜ್ಯ ಮಳಿಗೆಗಳ ಕಳ್ಳತನ ಮಾಡಿದ ಪ್ರಕರಣಗಳಲ್ಲಿ, ಹಾಗೂ ಹುಣಸೂರು ಭೇರ್ಯ, ಬೆಂಗಳೂರಿನಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದ್ದು, 2016 ಅಕ್ಟೋಬರ್ ತಿಂಗಳಿನಲ್ಲಿ ಜಾಮೀನಿನ ಮೇಲೆ ಹೊರ ಬಂದು ಬೆಂಗಳೂರು ನಗರದ ಪೀಣ್ಯ ಬಳಿ ಇರುವ 8ನೇ ಮೈಲಿನಲ್ಲಿ ಇರುವ ಹೋಟೇಲ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರೆಂಬುದು ತಿಳಿದು ಬಂದಿರುತ್ತದೆ. ಇವರೊಂದಿಗೆ ಕೊಡಗು ಜಿಲ್ಲೆಯ ಚೇನಂಡ ಮುತ್ತಪ್ಪನೂ ಬೆಂಗಳೂರಿನಲ್ಲಿ ಸೇರಿಕೊಂಡಿದ್ದು ಬಿಕಾಂ ವಿದ್ಯಾರ್ಥಿಯಾದ ಈತ ಆರ್ಥಿಕ ಕಾರಣಗಳಿಂದ  ವಿದ್ಯಾಭ್ಯಾಸವನ್ನು ಅರ್ದಕ್ಕೆ ಮೊಟಕುಗೊಳಿಸಿ ಬೆಂಗಳೂರಿನಲ್ಲಿ ಸತೀಶ್‌ ಯಾನೆ ರಂಗಪ್ಪ ಹಾಗೂ ಪ್ರಕಾಶ್‌ ಸಿದ್ದಪ್ಪ ತಳವಾರ್‌ ರವರು ಕೆಲಸ ಮಾಡುತ್ತಿದ್ದ ಹೋಟೆಲಿನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನೆಂಬುದು ತಿಳಿದು ಬಂದಿದ್ದು, ಈ ರೀತಿ ಸ್ನೇಹಿತರಾದ ಈ ಮೂವರೂ ಬೆಂಗಳೂರಿನಲ್ಲಿ ಮದ್ಯಪಾನ, ಗಾಂಜಾ ಸೇದುವ ಮತ್ತು ಲೈವ್‌ ಬ್ಯಾಂಡುಗಳಿಗೆ ಹೋಗುವ ದುರಭ್ಯಾಸಗಳನ್ನು ಬೆಳೆಸಿಕೊಂಡು ಸಂಪಾದಿಸುವ ಹಣ ಸಾಲದೆ ಸುಲಭವಾಗಿ ಹಣ ಸಂಪಾದಿಸಲು ತೀರ್ಮಾನಿಸಿ ಓಡಾಟಕ್ಕೆ ಉಪಯೋಗಿಸಲು ಕೆಎ-09-ಇಬಿ-3566 ಸಂಖ್ಯೆಯ ಹೀರೋ ಹೋಂಡಾ ಬೈಕನ್ನು ಹಾಸನದ ಅರಸೀಕೆರೆಯ ಜೇನುಕಲ್ಲು ಸಿದ್ದೇಶ್ವರ ಬೆಟ್ಟದ ಜಾತ್ರೆಯಲ್ಲಿ ಕಳೆದ ಏಪ್ರಿಲ್ ತಿಂಗಳಿನಲ್ಲಿ ಕಳವು ಮಾಡುತ್ತಾರೆ. ನಂತರ ಅದೇ ಮೋಟಾರ್ ಸೈಕಲಿನಲ್ಲಿ ಮೂವರೂ ಕೊಡಗು ಜಿಲ್ಲೆಗೆ ಬಂದು ವಿವಿಧ ದಿನಗಳಲ್ಲಿ ಮದ್ಯ ರಾತ್ರಿಯ ವೇಳೆ ಜಿಲ್ಲೆಯ ಕೇಂದ್ರಗಳಾದ ಮಡಿಕೇರಿ, ಮೂರ್ನಾಡು , ನಾಪೋಕ್ಲು, ಗೋಣಿಕೊಪ್ಪ, ಪೊನ್ನಂಪೇಟೆ, ತಿತಿಮತಿ, ಕುಶಾಲನಗರ, ಸಿದ್ದಾಪುರ, ನೆಲ್ಲಿಹುದಿಕೇರಿ ವ್ಯಾಪ್ತಿಯ 22 ವಾಣಿಜ್ಯ ಮಳಿಗೆಗಳ ರೋಲಿಂಗ್ ಶಟರ್ಸ್ ಅನ್ನು ಕೈಗಳಿಂದ ಎತ್ತಿ ಬೆಂಡ್ ಮಾಡಿ ಒಬ್ಬ ವ್ಯಕ್ತಿ ಒಳ ನುಗ್ಗುವಷ್ಟು ಅವಕಾಶ ಮಾಡಿಕೊಂಡು ಮಳಿಗೆಗಳ ಒಳ ನುಗ್ಗಿ ಕ್ಯಾಷ್ ಕೌಂಟರಿನಲ್ಲಿ ಇಡುತ್ತಿದ್ದ ನಗದು ಹಣ, ಹಾಗೂ ದಿನಸಿ ಅಂಗಡಿಗಳಲ್ಲಿ ಇರುತ್ತಿದ್ದ ಸಿಗರೇಟು ಪ್ಯಾಕೇಟುಗಳನ್ನು ಬಂಡಲುಗಟ್ಟಲೆ ಕಳ್ಳತನ ಮಾಡಿಕೊಂಡು ಮೋಟಾರ್ ಸೈಕಲಿನಲ್ಲಿ ಪರಾರಿಯಾಗುತ್ತಿದ್ದರು.
 
                       ದಿನಾಂಕ 29/05/2017ರಂದು ಸಂಜೆ 05-00 ಗಂಟೆ ಸಮಯದಲ್ಲಿ ಗೋಣಿಕೊಪ್ಪ ಸಮೀಪದ ಚೆನ್ನಂಗೊಲ್ಲಿ ಬಸ್ ಶೆಲ್ಟರ್ ಬಳಿ ಕೆಎ-09-ಇಬಿ-3566 ರ ಮೋಟಾರು ಬೈಕಿನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಮೂರು ಜನರನ್ನು ಪೊಲೀಸರು ವಶಕ್ಕೆ ಪಡೆದು  ತೀವ್ರ ವಿಚಾರಣೆಗೆ ಒಳಪಡಿಸಿದಾಗ ಒಟ್ಟು ಜಿಲ್ಲೆಯಲ್ಲಿ ನಡೆದ 22 ವಾಣಿಜ್ಯ ಮಳಿಗೆಗಳ ಕಳ್ಳತನ ಹಾಗೂ ಒಂದು ಬೈಕ್ ಕಳವು ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದು ಇವರಿಂದ ಒಟ್ಟು 1,12,900/- ರೂ ನಗದು ಹಣ, 17,300 ರೂಗಳ ಸಿಗರೇಟುಗಳು, ಕಳ್ಳತನ ಮಾಡಿದ ರೂ.40,000/- ಬೆಲೆ ಬಾಳುವ ಹೀರೋ ಹೊಂಡಾ ಸ್ಲೆಂಡರ್ ಬೈಕ್, ಕೃತ್ಯಕ್ಕೆ ಉಪಯೋಗಿಸಿದ 25,000/- ರೂ ಬೆಲೆ  ಬಾಳುವ ಟಿ.ವಿ.ಎಸ್ ಸ್ಟಾರ್ ಸಿಟಿ ಬೈಕ್ ಮತ್ತು 3 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

                  ಜಿಲ್ಲಾ ಪೊಲೀಸ್‌ ಇಲಾಖೆಗೆ ಸವಾಲಾಗಿ ಪರಿಣಮಿಸಿದ್ದ ಈ ಎಲ್ಲಾ ಕಳವು ಪ್ರಕರಣಗಳನ್ನು ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀ ಪಿ ರಾಜೇಂದ್ರ ಪ್ರಸಾದ್‌, ಐಪಿಎಸ್‌ರವರ  ಮಾರ್ಗದರ್ಶನದಲ್ಲಿ ವಿರಾಜಪೇಟೆ ಪೋಲೀಸ್ ಉಪಾಧೀಕ್ಷಕರಾದ ಶ್ರೀ. ನಾಗಪ್ಪ ರವರ ಮುಂದಾಳತ್ವದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕ ಶ್ರೀ ಪಿ.ಕೆ ರಾಜು ಮತ್ತು ಅವರ ತಂಡವು  ಬಂಧಿಸಿರುತ್ತದೆ. ಕಾರ್ಯಾಚರಣೆಯಲ್ಲಿ ಶ್ರೀ ಪಿ.ಕೆ ರಾಜು ಸಿ.ಪಿ. ಗೋಣಿಕೊಪ್ಪ ವೃತ್ತ, ಶ್ರೀ ಹೆಚ್.ವೈ ರಾಜು, ಪಿ.ಎಸ್. ಗೋಣಿಕೊಪ್ಪ ಠಾಣೆ, ಶ್ರೀ ಜಯರಾಮ್ ಪಿ.ಎಸ್. ಪೊನ್ನಂಪೇಟೆ ಠಾಣೆ, ಸಿಬ್ಬಂದಿಗಳಾದ ಹೆಚ್.ಕೆ ಕೃಷ್ಣ, ಕೆ.ಕೆ ಕುಶಾಲಪ್ಪ, ಮಹಮದ್ಆಲಿ, ಅಬ್ದುಲ್ ಮಜೀದ್ ಕೆ., ನಾಣಯ್ಯ, ಕುಮಾರ್, ಮನು,  ಸುಬ್ರಮಣಿ,  ಮೋಹನ ಟಿ.ಕೆ,  ಹರೀಶ,  ಸುಗಂಧ,  ಬಿ.ಟಿ. ಮಂಜುನಾಥ, ಕೃಷ್ಣ ಮೂರ್ತಿ, ಶೋಭ ಕೆ.ಟಿ ಹಾಗೂ ಚಾಲಕರಾದ ಕೃಷ್ಣಪ್ಪ, ಮಹೇಶ್, ರಾಜೇಶ್ ರವರುಗಳು ಪಾಲ್ಗೊಂಡಿದ್ದು ತಂಡದ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ ರಾಜೇಂದ್ರ ಪ್ರಸಾದ್‌ರವರು ಶ್ಲಾಘಿಸಿ ತಂಡಕ್ಕೆ ರೂ.10,000 ನಗದು ಬಹುಮಾನ ಘೋಷಿಸಿದ್ದಾರೆ. 


ವ್ಯಕ್ತಿ ಆತ್ಮಹತ್ಯೆ
                       ದಿನಾಂಕ 28/05/2017ರಂದು ಶ್ರೀಮಂಗಲ ಬಳಿಯ ಬಿರುನಾಣಿ ನಿವಾಸಿ ಪಣಿ ಎರವರ   ಮಾರ ಎಂಬಾತನು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ಮಾರವರು ಅತೀವ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಹೊಟ್ಟೆ ನೋವು ತಾಳಲಾರದೆ ಆತ್ಮಹತ್ಯೆ  ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್‌ ಕಳವು
                         ದಿನಾಂಕ 27/05/2017ರಂದು ಸೋಮವಾರಪೇಟೆ ಬಳಿಯ ಹಾನಗಲ್ಲು ನಿವಾಸಿ ಬಿ.ಜಿ.ಪುರುಷೋತ್ತಮ ಎಂಬವರು ಸೋಮವಾರಪೇಟೆ ನಗರದ ಸಿ.ಕೆ.ಸುಬ್ಬಯ್ಯ ರಸ್ತೆಯ ಹರ್ಷ ಟ್ರೇಡರ್ಸ್‌ ಅಂಗಡಿಯ ಮುಂಭಾಗ ಅವರ ಕೆಎ-12-6554ರ ಹೀರೋ ಹೋಂಡಾ ಮೋಟಾರು ಬೈಕನ್ನು ನಿಲ್ಲಿಸದ್ದು ದಿನಾಂಕ 29/05/2017ರಂದು ಬೆಳಿಗ್ಗೆ ಹೋಗಿ ನೋಡಿದಾಗ ಬೈಕ್ ನ್ನು ಯಾರೋ ಕಳ್ಳರು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಸಿಸಿಟಿವಿ ಕಳವು
                     ಶನಿವಾರಸಂತೆ ನಗರ ನಿವಾಸಿ ಸ್ವಾತಿ ಎಂಬವರಿಗೆ ಸೇರಿದ ಗುಡುಗಳಲೆ ಗ್ರಾಮದ ಅಕ್ಕಿ ಗಿರಣಿಯನ್ನು ದಿನಾಂಕ 28/05/2017ರ ಸಂಜೆ ಮುಚ್ಚಿ ಮನೆಗೆ ಹೋಗಿದ್ದು ದಿನಾಂಕ 29/05/2017ರಂದು ಗಿರಣಿಯ ಕೆಲಸಗಾರ ಪ್ರಸಾದ್‌ ಎಂಬವರು ಗಿರಣಿ ತೆರೆಯಲೆಂದು ಹೋದಾಗ ಯಾರೋ ಕಳ್ಳರು ಗಿರಣಿಯ ಮುಂಭಾಗದ ಬಾಗಿಲನ್ನು ಮುರಿದು ಒಳ ಪ್ರವೇಶಿಸಿ ಒಳಗಡೆ ಅಳವಡಿಸಿದ್ದ ಸುಮಾರು ರೂ.10,000/- ಮೌಲ್ಯದ ಸಿಸಿ ಕ್ಯಾಮೆರಾದ ಉಪಕರಣವನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕಿಗೆ ಕಾರು ಡಿಕ್ಕಿ
                   ದಿನಾಂಕ 29/05/2017ರಂದು ಸೋಮವಾರಪೇಟೆ ಬಳಿಯ ಹಂಡ್ಲಿ ನಿವಾಸಿ ಆನಂದ ಎಂಬವರು ಅವರ ಸ್ನೇಹಿತ ಚಂದ್ರು ಎಂಬವರೊಡನೆ ಕೆಎ-12-ಕೆ-7788ರ ಮೋಟಾರು ಬೈಕಿನಲ್ಲಿ ಕಾರ್ಯ ನಿಮಿತ್ತ ಕೊಡ್ಲಿಪೇಟೆಗೆ ಹೋಗಿ ವಾಪಾಸು ಶನಿವಾರಸಂತೆ ಕಡೆಗೆ ಬರುತ್ತಿರುವಾಗ ಮೂದರವಳ್ಳಿ ಗ್ರಾಮದ ಬಳಿ ಎದುರುಗಡೆಯಿಂದ ಕೆಎ-02-ಜೆಡ್-9280ರ ಕಾರನ್ನು ಅದರ ಚಾಲಕ ಪ್ರೇಕ್ಷಿತ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಆನಂದರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಆನಂದ ಮತ್ತು ಚಂದ್ರುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಮೇಲೆ ಹಲ್ಲೆ
                     ದಿನಾಂಕ 28/05/2017ರಂದು ಕೊಣನೂರು ಹೋಬಳಿಯ ಕಾಡನೂರು ಗ್ರಾಮದ ನಿವಾಸಿ ದರ್ಶನ್‌ ಎಂಬವರು ಕುಶಾಲನಗರ ಬಳಿಯ ಹೆಬ್ಬಾಲೆ ಗ್ರಾಮದಲ್ಲಿ ಶೃತಿ ಎಂಬವರೊಡನೆ ಬೈಕಿನಲ್ಲಿ ಹೋಗುತ್ತಿರುವಾಗ ಕೂಡ್ಲೂರು ಗ್ರಾಮದ ಮಹೇಶ ಎಂಬಾತನು ಬೈಕಿನಲ್ಲಿ ಬಂದು ದರ್ಶನ್‌ರವರನ್ನು ತಡೆದು ನಿಲ್ಲಿಸಿ ಶೃತಿಯವರನ್ನು  ನಿಂದಿಸಿ ದರ್ಶನ್‌ರವರಿಗೆ ಬೈಕಿನ ಕೀಯಿಂದ ಚುಚ್ಚಿ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನಕಲಿ ದಾಖಲೆ, ವಂಚನೆ
                     ಮೈಸೂರು ನಿವಾಸಿ ಅಂತೋಣಿ  ಕ್ರೂಸ್‌ ಎಂಬವರಿಗೆ ನಾಪೋಕ್ಲು  ಬಳಿಯ ಚೇಲಾವರ ಗ್ರಾಮದಲ್ಲಿ ಮೂರು ಏಕರೆ ಜಾಗವಿದ್ದು ಅದನ್ನು ನೋಡಿಕೊಳ್ಳಲು ಚೇಲಾವರ ನಿವಾಸಿ ಉಲ್ಲಾಸ್‌ ಎಂಬವರನ್ನು ನೇಮಿಸಿದ್ದು ಉಲ್ಲಾಸ್‌ರವರು ತಾನು ಅಂತೋಣಿ ಕ್ರೂಸ್‌ರವರ ಮಗನೆಂದೂ, ಅಂತೋಣಿ ಕ್ರೂಸ್‌ರವರು ನಿಧನ ಹೊಂದಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಾಗವನ್ನು ಉಲ್ಲಾಸ್‌ರವರ ಹೆಸರಿಗೆ ವರ್ಗಾವಣೆ ಮಾಡಿಕೊಂಡು  ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪರಸ್ಪರ ಹಲ್ಲೆ ಪ್ರಕರಣ
                  ದಿನಾಂಕ 29/05/2017ರಂದು ಮಡಿಕೇರಿ ಬಳಿಯ ಮೇಕೇರಿ ನಿವಾಸಿ ಸಿ.ಎ.ಪೂಣಚ್ಚ ಎಂಬವರು ಅವರ ಗದ್ದೆಯಲ್ಲಿ ಕೆಲಸ ಮಾಡಿಕೊಂಡಿರುವಾಗ ಅಲ್ಲಿಗೆ ಅದೇ ಗ್ರಾಮದ ನಿವಾಸಿಗಳಾದ ಮಣಿ ನಾಣಯ್ಯ, ಅವರ ಪತ್ನಿ ಕನ್ನಿಕೆ ಮತ್ತು ಮಗ  ಸುಧಿ ಸುಬ್ಬಯ್ಯ ಮುಂತಾದವರು ಸೇರಿಕೊಂಡು ಆಸ್ತಿಯ ವಿಚಾರವಾಗಿ ಜಗಳವಾಡಿ ಸುಧಿ ಸುಬ್ಬಯ್ಯನು ಕತ್ತಿಯಿಂದ ಪೂಣಚ್ಚನವರ ಮೇಲೆ ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು ಅದೇ ರೀತಿ ಸಿ.ಎ.ಪೂಣಚ್ಚನವರು ಮಣಿ ನಾಣಯ್ಯನವರ ಮೇಲೆ ಹಲ್ಲೆ ಮಾಡಿ ಮಣಿ ನಾಣಯ್ಯನವರ ಮಗ  ಸುಧಿ ಸುಬ್ಬಯ್ಯನವರ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು ಮಡಿಕೇರಿ ಗ್ರಾಮಾಂತರ ಪೊಲೀಸರು ಎರಡೂ ದೂರುಗಳಿಗೆ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದಾರಿ ತಡೆದು ಹಲ್ಲೆ
                ದಿನಾಂಕ 28/05/2017ರಂದು ಮಡಿಕೇರಿ ಬಳಿಯ ಹೆಬ್ಬೆಟ್ಟಗೇರಿ ನಿವಾಸಿ ಪಿ.ಕೆ.ರಜಿತ್ ಎಂಬವರು ಮಡಿಕೇರಿಯಿಂದ ಅವರ ಮನೆಗೆ ಹೋಗುತ್ತಿರುವಾಗ ಅಬ್ಬಿಧಾಮ ಎಸ್ಟೇಟಿನ ಬಳಿ ಹೆಬ್ಬೆಟ್ಟಗೇರಿ ಗ್ರಾಮದ ಕಾಶಿ ಮತ್ತು ಚಂಗಪ್ಪ ಎಂಬವರು ರಜಿತ್‌ರವರನ್ನು ದಾರಿ ತಡೆದು ದಿನಾಂಕ 27/05/2017ರಂದು ನಡೆದ ಜೀಪುಗಳ ಪ್ರತಿಭಟನೆ ವಿಚಾರವಾಗಿ ಜಗಳವಾಡಿ ದೊಣ್ಣೆಯಿಂದ ರಜಿತ್‌ರವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.