Wednesday, May 3, 2017

ದಾರಿ ತಡೆದು ಹಲ್ಲೆ:

     ಹಳೇ ದ್ವೇಷವನ್ನಿಟ್ಟುಕೊಂಡು ವ್ಯಕ್ತಿಗಳ ದಾರಿ ತಡೆದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ಸೋಮವಾರಪೇಟೆ ಠಾಣಾ ಸರಹದ್ದಿನ ನೇರಳೆ ಗ್ರಾಮದಲ್ಲಿ ನಡೆದಿದೆ. ನೇರಳೆ ಗ್ರಾಮದ ನಿವಾಸಿ ಟಿ.ಎಸ್. ಪ್ರಸಾದ್ ಎಂಬವರು ದಿನಾಂಕ 2-5-2017 ರಂದು ಅಪರಾಹ್ನ 3-00 ಗಂಟೆಗೆ ತನ್ನ ಮಗ ಶ್ರೇಯಸ್ ನೊಂದಿಗೆ ಮೋಟಾರ್ ಸೈಕಲಿನಲ್ಲಿ ತನ್ನ ಬಾಪ್ತು ತೋಟಕ್ಕೆ ಹೋಗುತ್ತಿದ್ದಾಗ ಅದೇ ಗ್ರಾಮದ ನಿವಾಸಿ ದಿನೇಶ್ ಎಂಬ ವ್ಯಕ್ತಿ ಟಿ.ಎಸ್. ಪ್ರಸಾದ್ ನವರ ಮೋಟಾರ್ ಸೈಕಲನ್ನು ತಡೆದು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಒಡ್ಡಿರುವುದಲ್ಲದೆ, ಶ್ರೇಯಸ್ ನ ಮೇಲೆ ಹಲ್ಲೆನಡೆಸಿರುತ್ತಾರೆಂದು ಸದರಿ ಟಿ.ಎಸ್. ಪ್ರಸಾದ್ ನವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೂಡ್ಸ್ ಆಟೋ ಅಪಘಾತ ಚಾಲಕನ ದುರ್ಮರಣ:

     ಚಾಲಕನ ನಿಯಂತ್ರಣ ಕಳೆದುಕೊಂಡ ಗೂಡ್ಸ್ ಆಟೋ ವಾಹನವ್ನು ರಸ್ತೆಯಲ್ಲಿ ಮಗುಚಿಬಿದ್ದ ಪರಿಣಾ, ಚಾಲಕ ಸಾವನಪ್ಪಿದ ಘಟನೆ ಸೋಮವಾರಪೇಟೆ ತಾಲೋಕು ನಗರೂರು ಗ್ರಾಮದಲ್ಲ ಸಂಭವಿಸಿದೆ. ದಿನಾಂಕ 2-5-2017 ರಂದು ಸಮಯ 16-20 ಗಂಟೆಗೆ ಸೋಮವಾರಪೇಟೆ ತಾಲೋಕು ತಣ್ಣೀರುಹಳ್ಳ ಗ್ರಾಮದ ನಿವಾಸಿ ನಾಗರಾಜು ಎಂಬವರು ತಮ್ಮ ಬಾಪ್ತು ಗೂಡ್ಸ್ ಆಟೋ ವನ್ನು ಚಲಾಯಿಸುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡ ಪರಿಣಾಮ ರಸ್ತೆಯಲ್ಲಿ ಮಗುಚಿ ಬಿದ್ದು, ತೀವ್ರವಾಗಿ ಗಾಯಗೊಂಡ ಸದರಿಯವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸದರಿಯವರು ಮೃತಪಟ್ಟಿದ್ದು ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆ ಕಳವು ಪ್ರಕರಣ ದಾಖಲು:
      ಮನೆಯ ಕಿಟಕಿ ಹಾಗು ಗೋಡೆಯನ್ನು ಒಡೆದು ಮನೆಯೊಳಗೆ ಪ್ರವೇಶಿಸಿದ ಕಳ್ಳರು ಚಿನ್ನಾಭರಣ ಹಾಗು ಮನೆ ಉಪಯೋಗಿ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋದ ಘಟನೆ ಶನಿವಾರಸಂತೆ ಬಳಿಯ ದೊಡ್ಡಳ್ಳಿ ಗ್ರಾಮದಲ್ಲಿ ನಡೆದಿದೆ. ದೊಡ್ಡಳ್ಳಿ ಗ್ರಾಮದ ನಿವಾಸಿ ರುದ್ರಯ್ಯ ಎಂಬವರ ಮನೆಗೆ ದಿನಾಂಕ 30-4-2017 ರಿಂದ 2-5-2017ರ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಕಿಟಕಿ ಮತ್ತು ಗೋಡೆಯನ್ನು ಒಡೆದು ಒಳಗೆ ನುಗ್ಗಿ, ಮನೆಯಿಂದ ಟಿ.ವಿ. ಮಂಚ, ಗ್ಯಾಸ್ ಸಿಲೆಂಡರ್, ಸ್ವವ್, ಕಬ್ಬಿಣದ ಬೀರು, ರೇಷ್ಮೆ ಸೀರೆ ಮತ್ತು ಚಿನ್ನಾಭರಣ ಇತ್ಯಾದಿ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಆಹಾರ ಪದಾರ್ಥ ಕಳವು:

     ಅಂಗನವಾಡಿ ಕೇಂದ್ರಕ್ಕೆ ನುಗ್ಗಿದ ಕಳ್ಳರು ಆಹಾರ ಪದಾರ್ಥವನ್ನು ಕಳವು ಮಾಡಿದ ಘಟನೆ ಮಡಿಕೇರಿ ತಾಲೋಕಿನ ಅಯ್ಯಂಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 29-4-2017 ರಂದು ಸಮಯ 15-00 ಗಂಟೆಗೆ ಫಿರ್ಯಾದಿ ಎಂ.ಎ. ಗೊಂಬೆ, ಅಂಗನವಾಡಿ ಕೇಂದ್ರ, ಗೊಲ್ಲರಕೇರಿ, ಅಯ್ಯಂಗೇರಿ ಗ್ರಾಮ ಇವರು ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿಕೊಂಡು ಹೋಗಿದ್ದು, ದಿನಾಂಕ 2-5-2017 ರಂದು ಬೆಳಗ್ಗೆ 9-00 ಗಂಟೆ ಸಮಯದಲ್ಲಿ ಬಂದು ನೋಡಿದಾಗ ಯಾರೋ ಕಳ್ಳರು ಅಂಗನವಾಡಿ ಕೇಂದ್ರದ ಹಿಂದಿನ ಕಿಟಕಿ ಬಾಗಿಲನ್ನು ಮುರಿದು ಸುಮಾರು 5,694-00 ರೂ ಬೆಲೆಬಾಳುವ ಆಹಾರ ಪದಾರ್ಥವನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡುಬಂದಿದ್ದು, ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ನೀರಿನಲ್ಲಿ ಮುಳುಗಿ ದಂಪತಿ ಸಾವು:

     ಹೊಳೆಯಲ್ಲಿ ಬಟ್ಟೆ ಒಗೆಯುವ ಸಂದರ್ಭ ಮಹಿಳೆಯೊಬ್ಬರು ಕಾಲು ಜಾರಿ ನೀರಿಗೆ ಬಿದ್ದಾಗ ರಕ್ಷಿಸಲು ಹೋದ ಪತಿ ಸಹ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸಿದ್ದಾಪುರದ ಹಚ್ಚಿನಾಡು ಗ್ರಾಮದಲ್ಲಿ ಸಂಭವಿಸಿದೆ. ಹಚ್ಚಿನಾಡು ಗ್ರಾಮದ ಪೊರುಕೊಂಡ ಬೋಪಣ್ಣ ನವರ ಕಾಫಿ ಎಸ್ಟೇಟ್ ಲೈನುಮನೆಯಲ್ಲಿ ವಾಸವಾಗಿದ್ದ ಶ್ರೀ ಚಿಣ್ಣ, ಪ್ರಾಯ 50 ಹಾಗು ಅವರ ಪತ್ನಿ ಶ್ರೀಮತಿ ಅಮ್ಮುಣ್ಣಿ, ಪ್ರಾಯ 43 ಇವರುಗಳು ದಿನಾಂಕ 1-5-2017 ರಂದು ತೋಟದ ಪಕ್ಕದ ಕಾವೇರಿ ಹೊಳೆಯಲ್ಲಿ ಬಟ್ಟೆಗಳನ್ನು ಒಗೆಯುತ್ತಿದ್ದಾಗ ಆಕಸ್ಮಿಕವಾಗಿ ಶ್ರೀಮತಿ ಅಮ್ಮುಣ್ಣಿರವರು ಕಾಲುಜಾರಿ ನೀರಿಗೆ ಬಿದ್ದಿದ್ದು ಆಕೆಯನ್ನು ರಕ್ಷಿಸಲು ಹೋದ ಪತಿ ಚಿಣ್ಣ ನೀರಿನಲ್ಲಿ ಮುಳುಗಿ ಇಬ್ಬರೂ ಸಾವನಪ್ಪಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.