Wednesday, May 24, 2017

 ಗೋಡೆ ಕುಸಿದು ವ್ಯಕ್ತಿಯ ಸಾವು:

      ವಿಪರೀತ ಸುರಿದ ಮಳೆಗೆ ಮನೆಯ ಗೋಡೆ ಮಲಗಿದ್ದ ವ್ಯಕ್ತಿಮೇಲೆ ಕುಸಿದು ಬಿದ್ದು ಸದರಿ ವ್ಯಕ್ತಿ ಸಾವನಪ್ಪಿದ ಘಟನೆ ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಅಳಿಲುಗುಪ್ಪೆ ಗ್ರಾಮದಲ್ಲಿ ನಡೆದಿದೆ. ಅಳಿಲುಗುಪ್ಪೆ ಗ್ರಾಮದಲ್ಲಿ ಜಿ.ಪಿ.ಗೋವಿಂದ ಎಂಬವರು ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದು, ದಿನಾಂಕ 23-5-2017 ರಂದು ಬೆಳಗಿನ ಜಾವ 6-45 ಗಂಟೆಯ ಸಮಯದಲ್ಲಿ ಸುರಿದ ಗಾಳಿ ಮಳೆಯಿಂದಾಗಿ ಮನೆಯ ಗೋಡೆಗಳು ಮನೆಯಲ್ಲಿ ಮಲಗಿದ್ದ ಜಿ.ಪಿ. ಗೋವಿಂದನವರ ಮೇಲೆ ಕುಸಿದು ಬಿದ್ದು ತೀವ್ರವಾಗಿ ಗಾಯಗೊಂಡ ಸದರಿಯವರು ಸಾವನಪ್ಪಿದ್ದು, ಕುಶಾಲನಗರ ಗ್ರಾಮಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

     ಜೀವನದಲ್ಲಿ ಜುಗುಪ್ಸೆಗೊಂಡ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಂಟಿಕೊಪ್ಪ ಸಮೀಪದ ಕಾರೆಕೊಲ್ಲಿ ಬಿ ಎಸ್ಟೇಟ್ ನಲ್ಲಿ ನಡೆದಿದೆ. ಹೊರೂರು ಗ್ರಾಮದಲ್ಲಿರುವ ಕಾರೆಕೊಪ್ಪ ಬಿ ಎಸ್ಟೇಟ್ ನಲ್ಲಿ ಕಾರ್ಮಿಕನಾಗಿರುವ 35 ವರ್ಷ ಪ್ರಾಯದ ಮಂಜು ಎಂಬ ವ್ಯಕ್ತಿ ಸಂಸಾರದಲ್ಲಿ ಜುಗುಪ್ಸೆಗೊಂಡು ದಿನಾಂಕ 23-4-2017 ರಂದು ಯಾವುದೋ ವಿಷವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕಾರೆಕೊಲ್ಲಿ ಬಿ. ಎಸ್ಟೇಟ್ ನಲ್ಲಿ ಕೆಲಸ ಮಾಡಿಕೊಂಡಿರುವ ಸೀನ ಎಂಬವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ.

ಕರಿಮೆಣಸು ಕಳ್ಳತನ ಮಾಡಿದ ವ್ಯಕ್ತಿಯ ಬಂಧನ:

     ಗಸ್ತು ಕರ್ತವ್ಯದಲ್ಲಿದ್ದ ಪೊನ್ನಂಪೇಟೆ ಪೊಲೀಸರಿಗೆ ಕರಿಮೆಣಸು ಕಳ್ಳತನ ಮಾಡಿದ ವ್ಯಕ್ತಿಯೋರ್ವ ಸಿಕ್ಕಿಬಿದ್ದಿದ್ದಾನೆ. ಪೊನ್ನಂಪೇಟೆ ಠಾಣಾಧಿಕಾರಿ ಸಿ.ಎನ್. ಜಯರಾಂ ಮತ್ತು ಸಿಬ್ಬಂದಿಯವರು ದಿನಾಂಕ 15-5-2017 ರಂದು ಆರೋಪಿಗಳ ಪತ್ತೆಕಾರ್ಯದಲ್ಲಿದ್ದಾಗ, ನಾಪೋಕ್ಲು ಸಮೀಪದ ನಾಲಡಿ ಗ್ರಾಮದ ನಿವಾಸಿ ಕುಡಿಯರ ಅಶೋಕ ಎಂಬಾತ ಬಸ್ಸು ತಂಗುದಾಣದಲ್ಲಿ ಇರುವುದು ಕಂಡು ಬಂದಿದ್ದು, ವಿಚಾರಣೆ ವೇಳೆ ಸದರಿ ವ್ಯಕ್ತಿ ಕೆಲಸ ಮಾಡುತ್ತಿದ್ದ ಕುಟ್ಟ ಗ್ರಾಮದ ಪೂಜೆಕಲ್ಲು ವಾಸಿ ಕಾಳಮಾಡ ಅಯ್ಯಣ್ಣ ಎಂಬವರ ಗೋದಾಮಿನಿಂದ 3 ಚೀಲ ಕರಿಮೆಣಸನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದ್ದು, ಸದರಿ ಮಾಹಿತಿ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಗಣಿಗಾರಿಕೆ ಪತ್ತೆ, ಪ್ರಕರಣ ದಾಖಲು:

     ಜಿಲ್ಲಾ ಡಿ.ಸಿ.ಐ.ಬಿ. ವಿಭಾಗದ ಪೊಲೀಸ್ ಇನ್ಸ್ ಪೆಕ್ಟರ್ ಅಬ್ದುಲ್ ಕರೀಂ ರಾವ್ ತರ್ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯೊಂದಿಗೆ ದಿನಾಂಕ 23-5-2017 ರಂದು ಸಮು 15-30 ಗಂಟೆ ಸಮಯದಲ್ಲಿ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಮತ್ತೂರು ಗ್ರಾಮದ ಚೆಪ್ಪುಡೀರ ನಟೇಶ ಎಂಬವರ ತೋಟದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕೋರೆಯನ್ನು ಪತ್ತೆಹಚ್ಚಿದ್ದು ಸ್ಥಳದಲ್ಲಿ ನಾಗರಾಜು ಬಿನ್ ಪರಮಶಿವ ಎಂಬವರಿದ್ದು, ಸರಕಾರದ ಪರವಾನಗಿ ಇಲ್ಲದೇ ಅಕ್ರಮವಾಗಿ ಕಲ್ಲು ಗಣಿಗಾರಿಕೆಯನ್ನು ನಡೆಸುತ್ತಿದ್ದ ಸದರಿ ಪರಮಶಿವ ರವರ ವಿರುದ್ಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ.

ದಾರಿ ತಡೆದು ವ್ಯಕ್ತಿಗೆ ಕೊಲೆ ಬೆದರಿಕೆ:

     ಶ್ರೀಮಂಗಲ ಠಾಣಾ ಸರಹದ್ದಿನ ಬಲ್ಯಮಂಡೂರು ಗ್ರಾಮದ ಎಂ.ಎನ್. ಚಂದ್ರ ಎಂಬವರು ದಿನಾಂಕ 23-5-2017 ರಂದು ಬಲ್ಯಮಂಡೂರು ಗ್ರಾಮದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅವರ ದಾರಿಯನ್ನು ವಿ.ಆರ್. ಗಣೇಶ ಮತ್ತು ವಿ.ವೈ. ರಾಜು ರವರು ಹಳೇ ದ್ವೇಷದಿಂದ ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಂಚೆ ಸಿಬ್ಬಂದಿಯಿಂದ ಹಣ ದುರುಪಯೋಗ:

     ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಮುಕ್ಕೋಡ್ಲು ಗ್ರಾಮೀಣ ಅಂಚೆ ಕಛೇರಿಯಲ್ಲಿ ಸದರಿ ಗ್ರಾಮದ ಶ್ರೀಮತಿ ಎ.ಎ. ಸುಮ ಎಂಬವರು ಪೋಸ್ಟ್ ಮಾಸ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಸದರಿಯವರು 2015-16ನೇ ಅವಧಿಯಲ್ಲಿ ಗ್ರಾಹಕರ ವಿವಿಧ ಖಾತೆಗಳಿಂದ ನಕಲಿ ಸಹಿ ಮಾಡಿ ಮತ್ತು ಆರ್.ಡಿ. ಖಾತೆಗಳಿಗೆ ಸಂಗ್ರಹಿಸಿದ ಹಣವನ್ನು ಜಮಾ ಮಾಡದೆ ಪಾಸ್ ಪುಸ್ತಕಗಳಲ್ಲಿ ಮಾತ್ರ ಹಣ ಜಮಾವಾದ ಬಗ್ಗೆ ನಮೂದು ಮಾಡಿ ಒಟ್ಟು 47,000/- ರೂ.ಗಳನ್ನು ದುರುಪಯೋಗಪಡಿಸಿರುತ್ತಾರೆಂದು ಸೋಮವಾರಪೇಟೆ ಉಪ ವಿಭಾಗದ ಪೋಸ್ಟಲ್ ಇನ್ಸ್ ಪೆಕ್ಟರ್ ಬಿ.ಶಣ್ಮುಗನ್ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.