Monday, June 12, 2017

ಬೆಂಕಿ ಆಕಸ್ಮಿಕ, ಮಹಿಳೆ ಸಾವು
                      ದಿನಾಂಕ 06/6/2017ರಂದು ಶ್ರೀಮಂಗಲ ಬಳಿಯ ಬಿರುನಾಣಿ ನಿವಾಸಿ ಬೊಟ್ಟಂಗಡ ಮನು ಚಿಣ್ಣಮ್ಮ ಎಂಬವರು ಸಂಜೆ ವೇಳೆ ಮನೆಯಲ್ಲಿ ವಿದ್ಯುತ್ ಕಡಿತಗೊಂಡ ಕಾರಣಕ್ಕೆ ಸೀಮೆಣ್ಣೆ ದೀಪವನ್ನು ಹಚ್ಚಲೆಂದು ಕತ್ತಲಲ್ಲಿ  ಸೀಮೆಣ್ಣೆ ದೀಪವನ್ನು ತೆಗೆಯುವಾಗ ಕೈಜಾರಿ ದೀಪವು ಕೆಳಗೆ ಬಿದ್ದ ಪರಿಣಾಮ ಸೀಮೆಣ್ಣೆಯು ಮನು ಚಿಣ್ಣಮ್ಮನವರ ಮೇಲೆ ಚೆಲ್ಲಿ ಸಮೀಪದಲ್ಲಿದ್ದ ಒಲೆಯಿಂದ ಬೆಂಕಿ  ಸೀರೆಗೆ ಹೊತ್ತಿಕೊಂಡು ಸುಟ್ಟು  ಹೋದ ನಿಮಿತ್ತ ಚಿಕಿತ್ಸೆಗಾಗಿ ಮೈಸೂರಿನ ಮಿಷನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮನು ಚಿಣ್ಣಮ್ಮನವರು ದಿನಾಂಕ 10/6/2017ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಫಘಾತ
                 ದಿನಾಂಕ 10/6/2017ರಂದು ಮಡಿಕೇರಿ ನಗರದ ಗೌಳಿಬೀದಿ ನಿವಾಸಿ ಬಿ.ಆರ್‌.ರಾಮಣ್ಣ ಎಂಬವರು ಅವರ ಸ್ನೇಹಿತ ಆನಂದ ಮತ್ತು ದಿಲನ್‌ ಎಂಬವರೊಂದಿಗೆ ಆನಂದರವರ ಕಾರು ಸಂಖ್ಯೆ ಕೆಎ-12-ಬಿ-4328ರಲ್ಲಿ ಮಂಗಳೂರಿಗೆ ಹೋಗಿ ವಾಪಾಸು ಮಡಿಕೇರಿಗೆ ಬರುತ್ತಿರುವಾಗ ನಡು ರಾತ್ರಿ 12:30 ಗಮಟೆಯ ವೇಳೆಗೆ ಮದೆನಾಡಿನ ಬಳಿ  ಆನಂದರವರು ಕಾರನ್ನು ಅತಿ ವೇಗ ಮತ್ತು ಆಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ರಸ್ತೆ ಮಧ್ಯದ  ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.