Sunday, June 25, 2017

ಕಳವು ಪ್ರಕರಣ
               ನಾಪೋಕ್ಲು ಠಾಣಾ ಸರಹದ್ದಿನ ಚೇಲವಾರ ಗ್ರಾಮದ ನಿವಾಸಿ ಸೋಮಯ್ಯ ಎಂಬುವವರು ಸಂಸಾರದೊಂದಿಗೆ ಮಂಡ್ಯದಲ್ಲಿ ವಾಸವಿದ್ದು, ದಿನಾಂಕ 24-06-2017 ರಂದು ಚೇಲವಾರಕ್ಕೆ ಬಂದು ತೋಟದ ಮನೆಗೆ ಹೋದಾಗ ಮನೆಯ ಮುಂದಿನ ಬಾಗಿಲಿನ ಬೀಗವನ್ನು ಯಾರೋ ಒಡೆದು ಒಳನುಗ್ಗಿ ಮನೆಯೊಳಗಿದ್ದ ಕಳೆ ಕೊಚ್ಚುವ ಯಂತ್ರ, ಸೋಲಾರ್ ತಟ್ಟೆ, ಬ್ಯಾಟರಿ ಮತ್ತು ಬಾಕ್ಸ್ ನ್ನು ಕಳವು ಮಾಡಿರುವುದು ಕಂಡು ಬಂದು ಈ ಬಗ್ಗೆ ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಕಾರು ಡಿಕ್ಕಿ
             ದಿನಾಂಕ 23-06-2017 ರಂದು ಕುಶಾಲನಗರದ ಜನತಾ ಕಾಲೋನಿಯ ನಿವಾಸಿ ಮೊಹಮ್ಮದ್ ಗೌಸ್ ಎಂಬುವವರು ಕೆಲಸ ಮುಗಿಸಿ ತಮ್ಮ ಮನೆಗೆ ರಾತ್ರಿ ಸಮಯ 10-30 ಗಂಟೆಗೆ ಗೌಡ ಸಮಾಜದ ಮುಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅವರ ಹಿಂಬದಿಯಿಂದ ಬಂದ ಕಾರನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಮೊಹಮ್ಮದ್ ಗೌಸ್ ರವರಿಗೆ ಡಿಕ್ಕಿ ಪಡಿಸಿ ನಿಲ್ಲಿಸದೇ ಹೋಗಿದ್ದು, ಗಾಯಗೊಂಡ ಮೊಹಮ್ಮದ್ ಗೌಸ್ ರವರನ್ನು ಚಿಕಿತ್ಸೆಯ ಬಗ್ಗೆ ಮೈಸೂರಿನ ಕೆ. ಆರ್ ಆಸ್ಪತ್ರೆಗೆ ದಾಖಲಿಸಿದ್ದು, ಈ ಬಗ್ಗೆ ಜಾಕೀರ್ ಹುಸೇನ್ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆಸ್ತಿ ವಿಚಾರದಲ್ಲಿ ಬೆದರಿಕೆ
               ದಿನಾಂಕ 24-06-2017 ರಂದು ಸೋಮವಾರಪೇಟೆ ತಾಲೂಕಿನ ನಂದಿಗುಂದ ಗ್ರಾಮದ ನಿವಾಸಿ ಶ್ರೀಮತಿ ಚಿನ್ನಮ್ಮ ಎಂಬುವವರೊಂದಿಗೆ ಆಸ್ತಿ ವಿಚಾರದಲ್ಲಿ ಅದೇ ಗ್ರಾಮದ ನಂದ, ದಾಸಯ್ಯ, ಚಂದ್ರಪ್ಪ, ಉಮೇಶ, ಸತೀಶ, ಕೆಂಚಮ್ಮ ಮತ್ತು ಇತರರು ಜಗಳ ತೆಗೆದು ಕೊಲೆ ಬೆದರಿಕೆ ಹಾಕಿರುವುದಾಗಿ ಚಿನ್ನಮ್ಮನವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪರಿಚಿತ ವ್ಯಕ್ತಿಯ  ಕೊಲೆ
              ದಿನಾಂಕ 24-06-2017 ರಂದು ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮದ ಕುಪ್ಪಂಡ ಮಂದಣ್ಣನವರ ತೋಟದಲ್ಲಿ ಕೆಲಸ ಮಾಡುತ್ತಿರುವ ಮಹದೇವ ಎಂಬುವವರು ನಡೆದುಕೊಂಡು ಹೋಗುತ್ತಿರುವಾಗ ದಾರಿಯಲ್ಲಿ ಮನುಷ್ಯನ ಕಾಲು ಬಿದ್ದಿದ್ದು, ಪಕ್ಕದ ಕೆರೆಯಲ್ಲಿ ನೋಡಲಾಗಿ ಕಾಲು ಮತ್ತು ತಲೆ ಇಲ್ದದ ಮೃತದೇಹ ಕೆರೆಯಲ್ಲಿ ತೇಲುತ್ತಿದ್ದು, ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಿ ತಲೆ ಮತ್ತು ಕಾಲನ್ನು ಕಡಿದು ಮೃತ ಶರೀರವನ್ನು ಕಲ್ಲಿನಿಂದ ಕಟ್ಟಿ ಕೆರೆಗೆ ಹಾಕಿರುವುದು ಕಂಡುಬಂದಿದ್ದು, ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿರುತ್ತಾರೆ.