Friday, June 30, 2017

ವ್ಯಕ್ತಿಯ ಮೇಲೆ ಹಲ್ಲೆ
                             ದಿನಾಂಕ 29/06/2017ರಂದು ಸುಂಟಿಕೊಪ್ಪ ಬಳಿಯ ಹರದೂರು ನಿವಾಸಿ ಜಿ.ಎಂ.ಮನಮೋಹನ ಎಂಬವರು ಸುಂಟಿಕೊಪ್ಪದಲ್ಲಿ ಕೆಲಸ ಮುಗಿಸಿ ಮರಳಿ ಮಾದಾಪುರ ರಸ್ತೆಯಲ್ಲಿರುವ ಮನೆಯ ಬಳಿ ಅವರ ಊರಿನ ಭರತ್‌ ಎಂಬವರೊಂದಿಗೆ ಮಾತನಾಡುತ್ತಿರುವಾಗ ಅಲ್ಲಿಗೆ ಬಂದ ಹರದೂರು ನಿವಾಸಿ ರಮೇಶ ಎಂಬವರ ಮಗ ದೀಪಕ್ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಮನಮೋಹನರವರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್‌ಗೆ ಕಾರು ಡಿಕ್ಕಿ
                          ದಿನಾಂಕ 29/06/2017ರಂದು ಶನಿವಾರಸಂತೆ ಬಳಿಯ ಮೂದರವಳ್ಳಿ ನಿವಾಸಿ ಎಂ.ಎನ್.ಮದನ್ ಎಂಬವರು ಅವರ ಅಣ್ಣನಿಗೆ ಸೇರಿದ ಕೆಎ-12-ಕೆ-4524ರ ಮೋಟಾರು ಬೈಕಿನಲ್ಲಿ ಶನಿವಾರಸಂತೆಯಿಂದ ಮೂದರವಳ್ಳಿಗೆ ಹೋಗುತ್ತಿರುವಾಗ ಶನಿವಾರಸಂತೆಯ ಸಂಪಿಗೆ ಕಾಂಪ್ಲೆಕ್ಸ್ ಬಳಿ ಬೈಕಿನ ಪೆಟ್ರೋಲ್ ಖಾಲಿಯಾಗಿದ್ದು ಬೈಕ್ ನಿಲ್ಲಿಸಿ ಅದನ್ನು ಪರಿಶೀಲಿಸುತ್ತಿರುವಾಗ ಹಿಂದಿನಿಂದ ಯಾವುದೋ ಒಂದು ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮದನ್‌ರವರಿಗೆ ಡಿಕ್ಕಿಪಡಿಸಿ ಕಾರನ್ನು ನಿಲ್ಲಿಸದೇ ಹೋಗಿದ್ದು ಮದನ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಗನ ಮೇಲೆ ಹಲ್ಲೆ
                       ದಿನಾಂಕ 29/06/2017ರಂದು ಮಡಿಕೇರಿ ಸಮೀಪದ ಕಾಲೂರು ನಿವಾಸಿ ಎ.ಬಿ.ಹರೀಶ ಎಂಬವರು ಅವರ ತಾಯಿಯೊಂದಿಗೆ ಮಡಿಕೇರಿ ಆಸ್ಪತ್ರೆಯಲ್ಲಿರುವ ಪತ್ನಿ ಮತ್ತು ಅತ್ತೆಯವರನ್ನು ನೋಡಿಕೊಂಡು ವಾಪಾಸು ಮನೆಗೆ ಹೋದಾಗ ಮನೆಯಲ್ಲಿದ್ದ ತಂದೆ ಬಸಪ್ಪನವರು ಹರೀಶ ಮತ್ತು ಆತನ ತಾಯಿಯನ್ನು ಕೊಲ್ಲುವುದಾಗಿ ಹೇಳುತ್ತಾ ಮೆಣಸಿನ ಪುಡಿಯನ್ನು ಹರೀಶ್‌ರವರ ಮುಖಕ್ಕೆ ಎರಚಿ ನಂತರ ಆತನ ಕುತ್ತಿಗೆಯನ್ನು ಹಿಚುಕಿ ಕೊಲೆ ಮಾಡಲು ಯತ್ನಿಸಿದ್ದು ತಡೆಯಲು ಬಂದ ಹರೀಶರವರ ತಾಯಿಗೂ ಸಹಾ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬಸ್ಸಿಗೆ ಕಾರು ಡಿಕ್ಕಿ
                       ದಿನಾಂಕ 29/06/2017ರಂದು ಮಡಿಕೇರಿಯ ಕೆಎಸ್‌ಆರ್‌ಟಿಸಿ ಡಿಪೋದ ಬಸ್‌ ಚಾಲಕ ಲಿಂಗರಾಜುರವರು ಕೆಎ-19-ಎಫ್-4392ರ ಬಸ್ಸನ್ನು ಚಾಲಿಸಿಕೊಂಡು ಆವಂದೂರು ಗ್ರಾಮದಿಂದ ಮಡಿಕೇರಿಗೆ ಬರುತ್ತಿರುವಾಗ ಕಾಟಕೇರಿ ಗ್ರಾಮದ ಬಳಿ ಎದುರುಗಡೆಯಿಂದ ಕೆಎ-19-ಎಂಡಿ-5682ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಬಸ್ಸಿಗೆ ಡಿಕ್ಕಿ ಪಡಿಸಿದ ಪರಿಣಾಮ ಬಸ್ಸು ಹಾಗೂ ಕಾರಿಗೆ ಹಾನಿಯುಂಟಾಗಿದ್ದು ಕಾರಿನಲ್ಲಿದ್ದವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪಾದಚಾರಿಗೆ ಜೀಪು ಡಿಕ್ಕಿ
                          ದಿನಾಂಕ 29/06/2017ರಂದು ಕುಟ್ಟ ಬಳಿಯ ಸಿಂಕೋನ ಕಾಲೋನಿ ನಿವಾಸಿ ಮರದಮುತ್ತು ಎಂಬವರು ಕುಟ್ಟ ನಗರದ ಪಿಪಿಎಂ ಬೇಕರಿ ಬಳಿ ಬಸ್ಸುಗಳನ್ನು ನಿಲುಗಡೆ ಮಾಡುವ ಸ್ಥಳದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅಲ್ಲಿ ರಸ್ತೆಯ ಬದಿ ನಿಲ್ಲಿಸಿದ್ದ ಕೆಎ-23-ಎಂ-3890ರ ಜೀಪನ್ನು ಅದರ ಚಾಲಕ ನಿರ್ಲಕ್ಷ್ಯತನದಿಂದ ಏಕಾಏಕಿ ಹಿಮ್ಮುಖವಾಗಿ  ಚಾಲಿಸಿದ  ಪರಿಣಾಮ ಜೀಪು ಮರದಮುತ್ತುರವರಿಗೆ ಡಿಕ್ಕಿಯಾಗಿ ಅವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.