Thursday, June 15, 2017

 ಕಾಣೆಯಾದ ವ್ಯಕ್ತಿಯ ಶವ ಪತ್ತೆ:

     ಕೆಲವು ದಿನಗಳಿಂದ ಕಾಣೆಯಾದ ವೃದ್ದರೊಬ್ಬರ ಮೃತ ದೇಹ ಶನಿವಾರಸಂತೆ ಠಾಣಾ ವ್ಯಾಪ್ತಿಯ ಹಂಡ್ಲಿ ಗ್ರಾಮದ ಕಾಫಿ ತೋಟವೊಂದರಲ್ಲಿ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಹಂಡ್ಲಿ ಗ್ರಾಮದ ನಿವಾಸಿ ಹೆಚ್.ಎಸ್. ಲೋಕೇಶ್ ಎಂಬವರ ತಂದೆ 75 ವರ್ಷ ಪ್ರಾಯದ ಶಂಕರಯ್ಯ ಎಂಬವರು ತಮ್ಮ ಮನೆಯಿಂದ ದಿನಾಂಕ 4.6.2017 ರಂದು ಕಾಣೆಯಾಗಿದ್ದು ದಿನಾಂಕ 14-6-2017 ರಂದು ಹಂಡ್ಲಿ ಗ್ರಾಮದ ನಟರಾಜ್ ಎಂಬವರ ಕಾಫಿ ತೋಟದಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪಾದಚಾರಿಗೆ ಬೈಕ್ ಡಿಕ್ಕಿ:

     ಕಾಲೇಜು ವಿದ್ಯಾರ್ಥಿಯೊಬ್ಬರಿಗೆ ಬೈಕ್ ಡಿಕ್ಕಿಯಾಗಿ ಗಾಯಗೊಂಡ ಘಟನೆ ಸುಂಟಿಕೊಪ್ಪ ಸಮೀಪದ ಕೊಡರಳ್ಳಿಯಿಂದ ವರದಿಯಾಗಿದೆ. ಸುಂಟಿಕೊಪ್ಪ ಸಮೀಪದ ಕಂಬಿಬಾಣೆ ಗಿರಿಜನ ಕಾಲೋನಿಯಲ್ಲಿ ವಾಸವಾಗಿರುವ ಶಂಕರ ಎಂಬವರ ಮಗ ಹೆಚ್.ಎಸ್. ಚೇತನ್ ಎಂಬವರು ದಿನಾಂಕ 14-6-2017 ರಂದು ಬೆಳಗ್ಗೆ 8-30 ಗಂಟೆ ಸಮಯದಲ್ಲಿ ಮಡಿಕೇರಿ-ಸುಂಟಿಕೊಪ್ಪ ರಸ್ತೆಯ ಕೊಡಗರಳ್ಳಿ ಜಂಕ್ಷನ್ ನಲ್ಲಿ ರಸ್ತೆ ದಾಟುವಾಗ ಕೆಎಸ್ ಆರ್ ಟಿಸಿ ಬಸ್ಸೊಂದು ಡಿಕ್ಕಿಯಾದ ಪರಿಣಾಮ ಸದರಿಯವರ ಮಂಡಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಜೀಪು ಅಪಘಾತ 8 ಮಂದಿಗೆ ಗಾಯ:

     ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಜೀಪು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ಉರುಳಿಬಿದ್ದು, ಜೀಪಿನ ಚಾಲಕ ಸೇರಿ 7 ಮಂದಿ ಕಾರ್ಮಿಕರು ಗಾಯಗೊಂಡ ಘಟನೆ ಕುಟ್ಟ ಠಾಣಾ ಸರಹದ್ದಿನ ಕೆ.ಬಾಡಗ ಗ್ರಾಮದಲ್ಲಿ ನಡೆದಿದೆ. ದಿನಾಂಕ 14-6-2017 ರಂದು ಕೋತೂರು ಗ್ರಾಮದ ಟಕ್ಕು ಮುತ್ತಣ್ಣ ಎಂಬವರ ಕಾಫಿ ತೋಟಕ್ಕೆ ಅವರ ಬಾಪ್ತು ಜೀಪಿನಲ್ಲಿ ಚಾಲಕ ಗೋವಿಂದನವರು ಕಾರ್ಮಿಕರನ್ನು ಕರೆದುಕೊಂಡು ಹೋಗಿ ಮರಳಿ ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ಜೀಪಿಗೆ ಕಾಡುಕೋಣವೊಂದು ಅಡ್ಡ ಬಂದು ಅದನ್ನು ತಪ್ಪಿಸಲು ಯತ್ನಿಸಿದ ಚಾಲಕ ಜೀಪಿನ ನಿಯಂತ್ರಣ ಕಳೆದುಕೊಂಡು ಜೀಪು ಮಗುಚಿಬಿದ್ದ ಕಾರಣ ಜೀಪಿನ ಚಾಲಕ ಸೇರಿ 8 ಮಂದಿ ಗಾಯಗೊಂಡಿದ್ದು, ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಆಸ್ತಿ ವಿವಾದ ಮಹಿಳೆ ಮೇಲೆ ಹಲ್ಲೆ:

     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕೆದಮುಳ್ಳೂರು ಗ್ರಾಮದ ವಾಸಿ ಶ್ರೀಮತಿ ಯಶೋಧ ಹಾಗು ಅನಿತ ಮತ್ತು ಆಕೆಯ ಗಂಡ ಪೂವಪ್ಪನವರ ನಡುವೆ ಆಸ್ತಿ ವಿವಾದ ವಿದ್ದು, ದಿನಾಂಕ 14-6-2017 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಬಿ.ಸಿ.. ಯಶೋಧ ರವರು ತಮ್ಮ ಮನೆಯಲ್ಲಿದ್ದಾಗ ಅನಿತ ಮತ್ತು ಆಕೆಯ ಗಂಡ ಪೂವಪ್ಪನವರು ಯಶೋಧರವರ ಮನೆಗೆ ಅಕ್ರಮ ಪ್ರವೇಶ ಮಾಡಿ ಆಸ್ತಿವಿಚಾರದಲ್ಲಿ ಜಗಳ ಮಾಡಿ ಯಶೋಧರವರ ಮೇಲೆ ಹಲ್ಲೆ ಮಾಡಿದ್ದು ಅಲ್ಲದೆ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.