Wednesday, June 28, 2017

ಪಾಲದಿಂದ ಬಿದ್ದು ಬಾಲಕನ ಮುರ್ಮರಣ:
     ಪಾಲ ದಾಟುತ್ತಿದ್ದ ಬಾಲಕನೋರ್ವ ಆಯ ತಪ್ಪಿ ಹೊಳೆಗೆ ಬಿದ್ದು ಸಾವನಪ್ಪಿದ ಘಟನೆ ನಾಪೋಕ್ಲು ಠಾಣಾ ವ್ಯಾಪ್ತಿಯ ನಾಲಡಿ ಗ್ರಾಮದಲ್ಲಿ ನಡೆದಿದೆ.  ಕೆ.ಪಿ. ಅಪ್ಪಣ್ಣ ಎಂಬವರು ಮಡಿಕೇರಿ ತಾಲೋಕಿನ ಕೋಪಟ್ಟಿ ಗ್ರಾಮದಲ್ಲಿ ವಾಸವಾಗಿದ್ದು ಅವರ ಮಗ 19 ವರ್ಷ ಪ್ರಾಯದ ಕುಶಾಲಪ್ಪ ಎಂಬಾತ ತನ್ನ ತಾಯಿ ಚೋಂದಮ್ಮ ನವರೊಂದಿಗೆ ನಾಲಡಿ ಗ್ರಾಮದ ಕೆ.ಕೆ. ರಘು ಎಂಬವರ  ಮನೆಗೆ ಹೋಗಿದ್ದು, ಬಿ.ಸಿ. ಮುತ್ತಣ್ಣ ಎಂಬವರ ತೋಟದೊಳಗೆ ಹೋಗುತ್ತಿದ್ದಾಗ ಹೊಳೆಗೆ ಅಡ್ಡಲಾಗಿ ಹಾಕಲಾದ ಮರದ ಪಾಲದಲ್ಲಿ ನಡೆದುಕೊಂಡು ದಾಟುವ ಸಂದರ್ಭದಲ್ಲಿ ಆಯ ತಪ್ಪಿ ಹೊಳೆಗೆ ಬಿದ್ದ ಕುಶಾಲಪ್ಪ ಸಾವನಪ್ಪಿದ್ದು, ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಆಸ್ತಿ ವಿವಾದ, ಗುಂಡು ಹೊಡೆದು ಕೊಲೆಗೆ ಯತ್ನ:
    ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ವ್ಯಕ್ತಿಯನ್ನು ಗುಂಡು ಹೊಡೆದು ಕೊಲೆಗೆ ಯತ್ನಿಸಿದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹೆರವನಾಡು ಗ್ರಾಮದಲ್ಲಿ ನಡೆದಿದೆ.  ಹೆರವನಾಡು ಗ್ರಾಮದ ನಿವಾಸಿ ಸೆಬಾಸ್ಟಿನ್ ಎಂಬವರು ದಿನಾಂಕ 27-6-2017 ರಂದು ತಮ್ಮ ತೋಟಕ್ಕೆ ತೋಟದ ರೈಟರ್ ಮಂದಣ್ಣನವರೊಂದಿಗೆ ಹೋಗಿದ್ದಾಗ, ಸದರಿ ತೋಟಕ್ಕೆ ಆರೋಪಿಗಳಾದ ನಾಣಯ್ಯ, ಪ್ರಿಯ ಪದ್ಮಾವತಿ, ಮುತ್ತಮ್ಮ ಮತ್ತು ರಘು ಎಂಬವರು ಅಕ್ರಮ ಪ್ರವೇಶ ಮಾಡಿ ಹಲ್ಲೆಗೆ ಯತ್ನಿಸಿದ್ದು ಅಲ್ಲದೆ, ಆರೋಪಿಗಳ ಪೈಕಿ ನಾಣಯ್ಯನವರು  ಕೋವಿಯಿಂದ ಮಂದಣ್ಣನವರ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದು, ಅಲ್ಲದೆ ಸೆಬಾಸ್ಟಿನ್ ಮತ್ತು ಮಂದಣ್ಣನವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆಂದು ಫಿರ್ಯಾದಿ ಸೆಬಾಸ್ಟಿನ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.  
ನೇಣುಬಿಗಿದು ಮಹಿಳೆ ಆತ್ಮಹತ್ಯೆ:
      ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಗೋಂದಿಬಸವನಳ್ಳಿ ಗ್ರಾಮದ ನಿವಾಸಿ ಶ್ರೀಮತಿ ಪುಟ್ಟಮ್ಮ ಎಂಬವರು ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದು, ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 26-6-2017 ರಂದು ತಮ್ಮ ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಸದರಿ ಮಹಿಳೆಯ ಸಹೋದರ ಅಪ್ಪಾಜಿ ಎಂಬವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.