Friday, July 7, 2017

 ಕರಿಮೆಣಸು ದುರುಪಯೋಗ ಪತ್ತೆ

ದಿಡೀರ್ ಶ್ರೀಮಂತನಾಗುವ ಆಸೆಯಿಂದ ಗೋದಾಮಿನಲ್ಲಿ ದಾಸ್ತಾನು ಇರಿಸಿದ್ದ ಕರಿಮೇಣಸನ್ನು  ಮಾರಿ ಶುಂಠಿ ಬೆಳೆಯಲು ಹೋಗಿ ನಷ್ಟ ಹೊಂದಿ ವಾಪಾಸು ಒಳ್ಳೆ ಮೆಣಸುಗಳನ್ನು ಹಿಂದಿರುಗಿಸಲಾಗದೇ ತಾನು ಕೆಲಸ ಮಾಡುತ್ತಿದ್ದ ಸೊಸ್ಶೆಟಿಗೆ 48 ಲಕ್ಷ ರೂಪಾಯಿ ನಷ್ಟ ಮಾಡಿದ ಪ್ರಕರಣವನ್ನು  ಕೊಡಗು ಜಿಲ್ಲಾ ಪೊಲೀಸರು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.ದಿನಾಂಕ 01/04/2017ರಂದು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಚೇರಂಡ ನಂದಾ ಸುಬ್ಬಯ್ಯ ರವರು ಮಾಲ್ದಾರೆ  ನಿವಾಸಿ ಮತ್ತು ಸೊಸ್ಶೆಟಿಯ ನೌಕರನಾದ ಮೈಕಲ್ ಎಂಬುವವರು ಗೋದಾಮಿನಲ್ಲಿಟ್ಟಿದ್ದ 104 ಚೀಲ ಕರಿಮೆಣಸನ್ನು ದುರುಪಯೋಗ ಪಡಿಸಿಕೊಂಡಿರುವುದಾಗಿ  ಸಿದ್ದಾಪುರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಮೊ.ಸಂ. 42/2017 ಕಲಂ. 406, 420 ಐಪಿಸಿ ಪ್ರಕರಣ ದಾಖಲಾಗಿದ್ದು ಪ್ರಕರಣದ ತನಿಖೆಯನ್ನು ಕೈಗೊಳ್ಳಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಪಿ.ರಾಜೇಂದ್ರ ಪ್ರಸಾದ್‌, ಐಪಿಎಸ್‌ರವರು   ಪ್ರಕರಣದ ತನಿಖೆಯನ್ನು ನಡೆಸುವ ಬಗ್ಗೆ ಜಿಲ್ಲಾ ಅಪರಾಧ ಪತ್ತೆದಳಕ್ಕೆ ವಹಿಸಿದ್ದು ಪ್ರಕರಣದ ತನಿಖೆ ಕೈಗೊಂಡ  ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸ್ ನಿರೀಕ್ಷಕರು ಆರೋಪಿ ಜೆ.ಮೈಕಲ್ ಪತ್ತೆಯ ಬಗ್ಗೆ ತಂಡ ರಚಿಸಿಕೊಂಡು ಕ್ರಮ ಕೈಗೊಂಡಿದ್ದರು. ಪ್ರಕರಣದ ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ ಜಿಲ್ಲಾ ಅಪರಾಧ ಪತ್ತೆ ದಳದ ತಂಡವು ದಿನಾಂಕ 06-07-2017ರಂದು ಸಂಜೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪಿರಿಯಾಪಟ್ಟಣದಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆದು  ಸೊಸ್ಶೆಟಿಯಲ್ಲಿ ದಾಸ್ತಾನು ಇರಿಸಿದ್ದ ಬಶೀರ್ ಮತ್ತು ಹೆಚ್.ಎಂ. ಶಿವ ಎಂಬವರಿಗೆ ಸೇರಿದ 48 ಲಕ್ಷ ಮೌಲ್ಯದ 7345 ಕೆ.ಜಿ ತೂಕದ 104 ಚೀಲ ಕರಿಮೆಣಸನ್ನು  ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ.

ಆರೋಪಿಯು ಪಿರಿಯಾಪಟ್ಟಣದ ಕಂಠಾಪುರದಲ್ಲಿ ಜಮಿನು ಗುತ್ತಿಗೆ ಪಡೆದು ಶುಂಠಿ ಬೆಳೆದಿದ್ದು ಶುಂಠಿ ವ್ಯವಸಾಯದಲ್ಲಿ ಲಕ್ಷಾಂತರ ರೂಪಾಯಿ ನಷ್ಟವಾದಾಗ  ಸಾಲ ಮರು ಪಾವತಿಸಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಉತ್ತಮ ಬೆಲೆಯ ನಿರೀಕ್ಷೆಯಿಂದ ಬೆಳೆಗಾರರು ಮತ್ತು ವರ್ತಕರು ದಾಸ್ತಾನು ಇರಿಸಿದ್ದ ಸುಮಾರು 48ಲಕ್ಷ ಮೌಲ್ಯದ 7345ಕೆ.ಜಿ ತೂಕದ 104ಚೀಲ ಕರಿಮೆಣಸನ್ನು ಕದ್ದು ಮಾರಾಟ ಮಾಡಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ.

ಪ್ರಕರಣವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ  ಶ್ರೀ ರಾಜೇಂದ್ರ ಪ್ರಸಾದ್‌ರವರ ಐಪಿಎಸ್ ರವರ ಮಾರ್ಗದರ್ಶನದಲ್ಲಿ  ಡಿಸಿಐಬಿ ನಿರೀಕ್ಷಕರಾದ ಕರೀಂ ರಾವ್‌ತರ್ ರವರು ತಮ್ಮ ಸಿಬ್ಬಂದಿಗಳಾದ ಎಸ್   ಹೆಚ್.ವೈ.ಹಮೀದ್, ಎನ್.ಟಿ. ತಮ್ಮಯ್ಯ,  ವಿ.ಜಿ.ವೆಂಕಟೇಶ್, ಕೆ.ಎಸ್.ಅನಿಲ್‌ ಕುಮಾರ್, ಎಂ.ಎನ್.ನಿರಂಜನ್, ಬಿ.ಎಲ್. ಯೊಗೇಶ್ ಕುಮಾರ್, ಕೆ.ಆರ್.ವಸಂತ, ಕೆ.ಎಸ್.ಶಶಿಕುಮಾರ್, ಯು..ಮಹೇಶ್ರವರ ಪತ್ತೆಹಚ್ಚಲಾಗಿದ್ದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಗಳ  ಕಾರ್ಯವೈಖರಿಯನ್ನು ಶ್ಲಾಘಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು 10 ಸಾವಿರ ನಗದು ಬಹುಮಾನವನ್ನು ಘೋಷಿಸಿರುತ್ತಾರೆ.

ಅಕ್ರಮ ಮರಳು ಸಾಗಾಟ
               ದಿನಾಂಕ 06/07/2017ರಂದು ಶನಿವಾರಸಂತೆ ಠಾಣಾ ಪಿಎಸ್‌ಐ ಹೆಚ್‌.ಎಂ.ಮರಿಸ್ವಾಮಿರವರು ಗಸ್ತು ಕರ್ತವ್ಯದಲ್ಲಿರುವಾಗ ಮುಂಜಾನೆ 3:00 ಗಂಟೆಗೆ ಹಂಪಾಪುರ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ  ಹಂಪಾಪುರ ನಿವಾಸಿ ಮಲ್ಲಪ್ಪ ಎಂಬವರು ಕೆಎ-12-ಬಿ-3970ರ ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಮರಳನ್ನು ಸಂಗ್ರಹಿಸಿ ಸಾಗಾಟ ಮಾಡಲು ನಿಲ್ಲಿಸಿದ್ದುದನ್ನು ಪತ್ತೆ ಹಚ್ಚಿ ಶನಿವಾರಸಂತೆ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

ವ್ಯಕ್ತಿಯ ಮೇಲೆ ಹಲ್ಲೆ
                        ದಿನಾಂಕ 06/07/2017ರಂದು ಸೋಮವಾರಪೇಟೆ ಬಳಿಯ ಹೊಸಳ್ಳಿ ನಿವಾಸಿ ದಿಲೀಪ್‌ ಎಂಬವರು ಅವರ ಹಾಗೂ ಕೃಷ್ಣಪ್ಪ ಎಂಬವರ ನಡುವಿನ ವಿವಾದದ ಬಗ್ಗೆ ಊರಿನ ದೇವಸ್ಥಾನದಲ್ಲಿ ಏರ್ಪಾಡಾಗಿದ್ದ ಸಭೆಗೆ ಹೋಗುತ್ತಿದ್ದಾಗ ಕೃಷ್ಣಪ್ಪನವರು ದಾರಿ ತಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಆಸ್ತಿ ವಿಚಾರ, ಹಲ್ಲೆ
                       ದಿನಾಂಕ 06/07/2017ರಂದು ವಿರಾಜಪೇಟೆ ಬಳಿಯ ಚೆಂಬೆಬೆಳ್ಳೂರು ನಿವಾಸಿ ಕೊಳುವಂಡ ಕಾರ್ಯಪ್ಪ ಎಂಬವರು ವಿರಾಜಪೇಟೆ ನಗರದ ಮೂರ್ನಾಡು ರಸ್ತೆಯಲ್ಲಿ ತಮ್ಮ ಧನು ಹಾಗೂ ಪತ್ನಿ ಸುಜಾತರವರೊಂದಿಗೆ ನಡೆದುಕೊಂಡು ಹೋಗುತ್ತಿರುವಾಗ ಕೊಳುವಂಡ ಮನೋಜ್, ಕೊಂಗೇರ ಮಿಲನ್, ಮಂಡೇಪಂಡ ರಾಜೇಶ್‌ ಮತ್ತು ಕೊಂಗೇರ ಕಾರ್ಯಪ್ಪ ಎಂಬವರುಗಳು ಸೇರಿಕೊಂಡು ಆಸ್ತಿ ವಿಚಾರವಾಗಿ ಕೊಳುವಂಡ ಕಾರ್ಯಪ್ಪನವರ ಜೊತೆಗೆ ಜಗಳವಾಡಿ ಕಲ್ಲಿನಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಫಘಾತ
                     ದಿನಾಂಕ 06/07/2017ರಂದು ಮಂಡ್ಯ ಜಿಲ್ಲೆಯ ರಾಜೀವ್‌ ಎಂಬವರು ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಮಣ್ಯ ದೇವಸ್ಥಾನಕ್ಕೆ ಕೆಎ-03-ಎಡಿ-3104ರ ಕಾರಿನಲ್ಲಿ ಚಾಲಕ ಮಂಜುನಾಥ್ ಹಾಗೂ ಸ್ನೇಹಿತ ರಾಜಗೋಪಾಲ್‌ರವರೊಂದಿಗೆ ಹೋಗುತ್ತಿರುವಾಗ ದೇವರಕೊಲ್ಲಿ ಬಳಿ ರಸ್ತೆಯಲ್ಲಿ ಅಡ್ಡ ಬಂದ ನಾಯಿಯೊಂದನ್ನು ತಪ್ಪಿಸುವ ಸಂದರ್ಭ ಕಾರು ಚಾಲಕ ಮಂಜುನಾಥ್‌ರವರ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಹಾನಿಗೊಳಗಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.