Thursday, July 13, 2017

ಬಾರ್‌ ದಾಂಧಲೆ, ಆರೋಪಿಗಳ ಬಂಧನ
                       ದಿನಾಂಕ 10-07-2017ರಂದು ಸಂಜೆ ಮಡಿಕೇರಿ ನಗರದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಮಾರುತಿ ಬಾರ್‌ಗೆ ಹೆಲ್ಮೆಟ್ ಧರಿಸಿಕೊಂಡು ಕಲ್ಲು ತೂರಿ ದಾಂದಲೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

                           ದಿನಾಂಕ 10-7-2017ರಂದು ಸಂಜೆ ಮಾರುತಿ ಬಾರಿನಲ್ಲಿ ಮದ್ಯಪಾನ ಮಾಡಲು ಬಂದಿದ್ದ ಗಾಳಿಬೀಡು ಗ್ರಾಮದ ಮೊಣ್ಣಪ್ಪ ಯಾನೆ ಸರಾ ಎಂಬವರು ಮನೆಯಲ್ಲಿ ಇಟ್ಟಿದ್ದ ಕೋವಿ ಕಾಣೆಯಾಗಿರುವ ಬಗ್ಗೆ ಅದೇ ಗ್ರಾಮದ ಕುಡಿಯರ ಲವ ಮತ್ತು ಕೀರ್ತನ್ ಇವರ ಜೊತೆಯಲ್ಲಿ ವಾಗ್ವಾದ ಮಾಡುತ್ತಿರುವಾಗ ಅಲ್ಲಿಗೆ ಮದ್ಯಪಾನ ಮಾಡಲು ಬಂದ ದೇಶಿಕ್ ಮತ್ತು ಮನೋಜ್ ಎಂಬವರುಗಳು ಅವರಿಗೆ ಸಂಬಂಧ ಇಲ್ಲದ ವಿಷಯಕ್ಕೆ ಜಗಳ ಮಾಡಿದ್ದು ಬಾರಿನಲ್ಲಿದ್ದವರು ಇವರ ಜಗಳ ಬಿಡಿಸಿ ಕಳುಹಿಸಿರುತ್ತಾರೆ. ಮದ್ಯಪಾನ ಮಾಡಿದ್ದ ದೇಶಿಕನು ಬಾರಿನಲ್ಲಿದ್ದವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಸಿಟ್ಟಿಗೆದ್ದು ಮೊಬೈಲ್ ಕರೆ ಮಾಡಿ ತಮ್ಮ ಗೆಳೆಯರನ್ನು ಮಡಿಕೇರಿಗೆ ಕರೆಸುತ್ತಾನೆ.

                         ಸ್ನೇಹಿತನ ಮೇಲೆ ಹಲ್ಲೆಗೆ ಕಾರಣವಾದ ಮಾರುತಿ ಬಾರಿನ ಮೇಲೆ ಪ್ರತಿಕಾರ ತೀರಿಸಲು ಆತನ ಸ್ನೇಹಿತರ ತಂಡವೊಂದು ರಾತ್ರಿ ವೇಳೆ ಮಡಿಕೇರಿಗೆ ಬಂದು ಒಟ್ಟು ಸೇರಿ ಕಲ್ಲು ಮತ್ತು ಸೋಡಾ ಬಾಟಲಿಗಳನ್ನು ಸಂಗ್ರಹಿಸಿ ಸಿನಿಮೀಯ ಮಾದರಿಯಲ್ಲಿ ಹಠಾತ್ತಾಗಿ ಬಾರಿನ ಮೇಲೆ ಕಲ್ಲು ಹಾಗೂ ಬಾಟಲಿಗಳನ್ನು ತೂರಿ ಧಾಳಿ ಮಾಡಿ ಬಾರಿನಲ್ಲಿದ್ದ ಕೆಲಸಗಾರರ ಮೇಲೆ ಹಲ್ಲೆ ಮಾಡಿ ಮದ್ಯದ ಬಾಟಲುಗಳನ್ನು ನಾಶಪಡಿಸುತ್ತಾರೆ. ಘಟನೆಯ ಸಿಸಿಟಿವಿ ದೃಷ್ಯಾವಳಿಗಳು ನಗರದ ಸಾರ್ವಜನಿಕರಲ್ಲಿ ಆತಂಕವನ್ನು ಸೃಷ್ಟಿಸಿತ್ತು.

                      ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಐಪಿಎಸ್‌ರವರು ಪ್ರಕರಣವನ್ನು ಡಿಸಿಐಬಿ ವಿಭಾಗಕ್ಕೆ ವಹಿಸಿದ್ದು, ತನಿಖೆ ನಡೆಸಿದ ಡಿಸಿಐಬಿ ವಿಭಾಗದ ಪೊಲೀಸ್ ನಿರೀಕ್ಷಕರಾದ ಕರೀಂ ರಾವ್‌ತರ್ ಹಾಗೂ ತಂಡ ದಿನಾಂಕ 13-7-2017ರಂದು ಘಟನೆಯ ಆರೋಪಿಗಳಾದ ಮಡಿಕೇರಿ ಬಳಿಯ ಅರುತೊಕ್ಲು ಗ್ರಾಮದ ನಿವಾಸಿ ಪ್ರಸ್ತುತ ನಗರದ ಮೆಡಿಕಲ್‌ ಕಾಲೇಜಿನಲ್ಲಿ ಸ್ಟೋರ್‌ ಕೀಪರ್‌ ಆಗಿರುವ ಟಿ.ಜಿ.ದೇಶಿಕ್, ಕಾರುಗುಂದ ಗ್ರಾಮದ ನಿವಾಸಿ ಮನೋಜ್‌ ಕೆ.ಎಸ್., ಫ್ಯಾಶನ್ ಡಿಸೈನಿಂಗ್‌ ವಿದ್ಯಾರ್ಥಿಯಾಗಿರುವ ಅರುವತೊಕ್ಲು ಗ್ರಾಮದ ಪಿ.ಡಿ.ಕುಶ, ಚೆಟ್ಟಳ್ಳಿ ಬಳಿಯ ಕಂಡಕೆರೆ ನಿವಾಸಿಗಳಾದ ಶ್ರವಣ್, ಫಯಾಜ್, ಮತ್ತು ಮಂಗಳಾದೇವಿ ನಗರದ ಕಿರಣ್‌ ಎಂಬ ಆರು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

                    ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್‌ರವರ ಮಾರ್ಗದರ್ಶನದಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಕರೀಂ ರಾವ್‌ತರ್ ಎಎಸ್ ಐಗಳಾದ ಕೆ.ವೈ.ಹಮೀದ್ ,ಎನ್.ಟಿ. ತಮ್ಮಯ್ಯ, ಸಿಬ್ಬಂದಿಗಳಾದ ವಿ.ಜಿ.ವೆಂಕಟೇಶ್, ಕೆ.ಎಸ್.ಅನಿಲ್‌ಕುಮಾರ್, ಎಂ.ಎನ್.ನಿರಂಜನ್, ಬಿ.ಎಲ್. ಯೊಗೇಶ್ ಕುಮಾರ್, ಕೆ.ಆರ್.ವಸಂತ, ಕೆ.ಎಸ್.ಶಶಿಕುಮಾರ್ ಮತ್ತು ಯು.ಎ.ಮಹೇಶ್ ರವರು ಪಾಲ್ಗೊಂಡಿದ್ದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.


ಬಾಲಕ ಕಾಣೆ
                        ದಿನಾಂಕ 11/07/2017ರಂದು ಮಡಿಕೇರಿ ನಗರದ ಬಾಲಕರ ಬಾಲ ಮಂದಿರದಲ್ಲಿರುವ ಸುಪ್ರೀತ್ ಎಂಬ ಬಾಲಕನು ಎಂದಿನಂತೆ ತಾನು ವ್ಯಾಸಂಗ ಮಾಡುತ್ತಿರುವ ಮಡಿಕೇರಿ ನಗರದ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಗೆ ಹೋಗಿದ್ದು ಶಾಲೆಯಿಂದ ಮರಳಿ ಬಾಲಮಂದಿರಕ್ಕೆ ಬಂದಿರುವುದಿಲ್ಲವೆಂದು ಬಾಲ ಮಂದಿರದ ಅಧೀಕ್ಷಕರಾದ ಚರಣ್ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿಯ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ವ್ಯಕ್ತಿ ಆತ್ಮಹತ್ಯೆ
                       ದಿನಾಂಕ 12/07/2017ರಂದು ವಿರಾಜಪೇಟೆ ಬಳಿಯ ಹೆಗ್ಗಳ ಗ್ರಾಮದ ಎಡಮಕ್ಕಿ  ನಿವಾಸಿ ಅಣ್ಣಿ ಎಂಬವರು ರಾತ್ರಿ ವೇಳೆ ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಅತೀವ ಮದ್ಯವ್ಯಸನಿಯಾಗಿದ್ದ ಅಣ್ನಿರವರು ಯಾವುದೋ ಕಾರಣಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.