Sunday, July 16, 2017

ಗುಂಡು ಹಾರಿಸಿ ಸೋದರನ ಹತ್ಯೆ
                          ಗುಂಡು ಹಾರಿಸಿ ಸೋದರನ ಹತ್ಯೆಗೈದ ಪ್ರಕರಣ ಸುಂಟಿಕೊಪ್ಪ ಬಳಿಯ ಹರದೂರು ಬಳಿ ನಡೆದಿದೆ. ಹರದೂರು ನಿವಾಸಿ ಮೇದುರ ಸುರೇಶ್‌ ಎಂಬಾತನೇ ಅಣ್ಣನಿಂದ ಹತ್ಯೆಗೊಳಗಾದ ವ್ಯಕ್ತಿ.
                            ದಿನಾಂಕ 15/07/2017ರಂದು ಹರದೂರಿನಲ್ಲಿ ಮೇದುರ ಸುರೇಶ್‌ರವರ ಮನೆಗೆ ಬಂದ ಆತನ ಅಣ್ಣ ಮೇದುರ ಕಾವೇರಪ್ಪ ಎಂಬಾತ ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಕಾಗದಪತ್ರಕ್ಕೆ ಸಹಿ ಹಾಕುವಂತೆ ತಾಯಿಯನ್ನು ಒತ್ತಾಯಿಸಿದ್ದು ಆಗ ಅಲ್ಲಿಗೆ ಬಂದ ಸುರೇಶ್‌ರವರು ಕಾಗದ ಪತ್ರಕ್ಕೆ ಏಕಾ ಏಕಿ ಸಹಿ ಹಾಕದೆ ನಾಲ್ಕು ಜನರ ಸಮ್ಮುಖದಲ್ಲಿ ಸಹಿ ಹಾಕುವಂತೆ ತಾಯಿಗೆ ಹೇಳಿದ್ದರೆನ್ನಲಾಗಿದೆ. ನಂತರ ಸುರೇಶ್‌ರವರು ಗದ್ದೆಯ ಕಡೆಗೆ ಹೋಗಿದ್ದು ಆ ಸಂದರ್ಭದಲ್ಲಿ ಅಣ್ಣ ಕಾವೇರಪ್ಪ ಕೋವಿಯೊಂದನ್ನು ಆತನ ಕಾರಿಗೆ ಹಾಕಿಕೊಂಡು  ಸುರೇಶನನ್ನು ಹಿಂಬಾಲಿಸಿದ್ದು ಸುರೇಶನ ಪತ್ನಿ ಶಾರದಾರವರು ಕೂಡಲೇ ಅವರಿಬ್ಬರನ್ನು ಹಿಂಬಾಲಿಸಿ ಹೋಗುವಷ್ಟರಲ್ಲಿ ಕಾವೇರಪ್ಪನವರು ಸುರೇಶ್‌ರವರಿಗೆ ಹಿಂಭಾಗದಿಂದ ಗುಂಡು ಹಾರಿಸಿದ್ದು ಸುರೇಶ್‌ರವರು ರಕ್ತದ ಮಡುವಿನಲ್ಲಿ ಬಿದ್ದುದನ್ನು ಕಂಡು ಶಾರದಾರವರು ಕಿರುಚಿಕೊಂಡಾಗ ಕಾವೇರಪ್ಪನವರು ಶಾರದಾರನ್ನು ಸಹ ಕೊಲ್ಲುವುದಾಗಿ ಬೆದರಿಕೆ ಹಾಕಿ ಕಾರಿನಲ್ಲಿ ಹೊರಟು ಹೋದರೆನ್ನಲಾಗಿದೆ. ಕೂಡಲೇ ಶಾರದಾರವರು ನೆರೆಯ ಹೊನ್ನಪ್ಪ ಮತ್ತು ಪುಟ್ಟಣ್ಣ ಎಂಬವರ ಸಹಾಯದಿಂದ ಗಾಯಾಳು ಸುರೇಶ್‌ರವರನ್ನು ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದಾಗ ಅಲ್ಲಿ ವೈದ್ಯರು ಸುರೇಶ್‌ರವರು ಮೃತಪಟ್ಟಿರುವುದಾಗಿ ದೃಢೀಕರಿಸಿರುವುದಾಗಿ ಶಾರದಾರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್‌ ಅವಘಢ
                         ದಿನಾಂಕ 14/07/2017ರಂದು ಕುಶಾಲನಗರ ಬಳಿಯ ಕೂಡಿಗೆ ನಿವಾಸಿ ಕಿರಣ್ ಎಂಬವರು ಅವರ ಕೆಎ-13-ಜೆ-4192ರ ಬೈಕಿನಲ್ಲಿ ಕೂಡು ಮಂಗಳೂರು ಬಳಿ ಹೋಗುತ್ತಿರುವಾಗ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ರಸ್ತೆಯಲ್ಲಿ ಹೋಗುತ್ತಿದ್ದ ಒಂದು ಬಿಳಿ ಬಣ್ಣದ ಹಸುವಿಗೆ ಡಿಕ್ಕಿಪಡಿಸಿದ ಪರಿಣಾಮ ಹಸು ಸಾವಿಗೀಡಾಗಿದ್ದು ಕಿರಣ್‌ರವರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪರಸ್ಪರ ಕಾರು ಡಿಕ್ಕಿ
                     ದಿನಾಂಕ 15/07/2017ರಂದು ತುಮಕೂರಿನ ನಿವಾಸಿ ನವೀನ್‌ ಕುಮಾರ್ ಎಂಬವರು ಅವರ ಕೆಎ-06-ಡಿ-9794ರ ಕಾರಿನಲ್ಲಿ ತುಮಕೂರಿನ ನಿವಾಸಿಗಳಾದ ಗಂಗಾಧರ, ಕಿಶೋರ್‌ ಮತ್ತು ಇತರರನ್ನು ಪ್ರವಾಸಕ್ಕೆಂದು ಮಡಿಕೇರಿಗೆ ಕರೆದುಕೊಂಡು ಬಂದು ಮಡಿಕೇರಿಯ ಬಳಿ ಅಬ್ಬಫಾಲ್ಸ್  ಜಲಪಾತವನ್ನು ವೀಕ್ಷಿಸಿ ಮಡಿಕೇರಿ ಕಡೆಗೆ ಮರಳಿ ಬರುತ್ತಿರುವಾಗ ಕೆ.ನಿಡುಗಣೆ ಗ್ರಾಮದ ಬಳಿ ಕೆಎ-03-ಡಿ-7089ರ ಇನ್ನೋವಾ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನವೀನ್‌ರವರು ಚಾಲಿಸುತ್ತಿದ್ದ ಕಾರಿಗೆ  ಡಿಕ್ಕಿಪಡಿಸಿದ ಪರಿಣಾಮ ಎರಡೂ ಕಾರುಗಳಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.