Sunday, July 2, 2017

  ಪತ್ರಿಕಾ ಪ್ರಕಟಣೆ:

      ದಿನಾಂಕ 24-06-2017 ರಂದು , ಕುಪ್ಪಂಡ ಮಂದಣ್ಣ ರವರ ತೋಟದ ಒಳಗಡೆ ಇರುವ ಕೆರೆಯ ಬಳಿಗೆ ದಾರಿಯಲ್ಲಿ ಮನುಷ್ಯನ ಕಾಲು ಮಂಡಿಯ ಕೆಳಭಾಗದಿಂದ ಕತ್ತಿರಿಸಿ ಬಿದ್ದಿರುವುದು ಹಾಗೂ ಕೆರೆಯಲ್ಲಿ ಒಂದು ಮೃತ ಶರೀರ ನೀರಿನಲ್ಲಿ ತೇಲುತ್ತಿರುವುದುದಾಗಿ ಮಕ್ಕಂದೂರು ಗ್ರಾಮದ ನಿವಾಸಿ ಮಹಾದೇವ ಶೆಟ್ಟಿ ಎಂಬುವರು ನೀಡಿದ ದೂರಿನ ಅನ್ವಯ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಮೊ. ಸಂ. 154/2017 ಕಲಂ. 302, 201 ಐಪಿಸಿ ರೀತ್ಯ ಪ್ರಕರಣ ದಾಖಲಾಗಿದ್ದು, ಕೂಡಲೇ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕರಣವನ್ನು ಬೇದಿಸುವ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಶ್ರೀ. ಬಿ.ಆರ್. ಪ್ರದೀಪ್ ಹಾಗೂ ಕುಶಾಲನಗರ ವೃತ್ತ ನಿರೀಕ್ಷಕರಾದ ಶ್ರೀ. ಕ್ಯಾತೇಗೌಡ ರವರ ನೇತ್ರತ್ವದಲ್ಲಿ ತಂಡವನ್ನು ರಚಿಸಲಾಗಿತ್ತು.

     ಈ ಪ್ರಕರಣವನ್ನು ಬೇದಿಸುವ ಬಗ್ಗೆ ಪಿ.ಎಸ್.ಐ. ಸುಂಟಿಕೊಪ್ಪ ಠಾಣೆ ಮತ್ತು ಸಿಬ್ಬಂದಿಯವರು ಕಾರ್ಯಪ್ರವೃತ್ತರಾಗಿ ಬಾತ್ಮೀದಾರರ ಸಹಾಯದಿಂದ ದಿನಾಂಕ 1-7-2017 ರಂದು ಸುಂಟಿಕೊಪ್ಪದ ಗದ್ದೆಹಳ್ಳದ ಬಳಿ ಈ ಪ್ರಕರಣದ ಆರೋಪಿಯಾದ  ಉಮ್ಮರ್, ತಂದೆ ಮಾನು ಪ್ರಾಯ 40 ವರ್ಷ, ಚಾಲಕ ವೃತ್ತಿ, ವಾಸ ಮದುರಮ್ಮ ಬಡಾವಣೆ ಈತನನ್ನು ದಸ್ತಗಿರಿ ಮಾಡಿ ಸಿ.ಪಿ.ಐ. ಮಡಿಕೇರಿ  ಗ್ರಾಮಾಂತರ ವೃತ್ತ ಮತ್ತು ಸಿ.ಪಿ.ಐ. ಕುಶಾಲನಗರ ವೃತ್ತ ರವರ ಮುಂದು ಹಾಜರುಪಡಿಸಿದ್ದು, ಆರೋಪಿಯನ್ನು ವಿಚಾರಣೆ ಮಾಡಲಾಗಿ, ಮೃತ ವ್ಯಕ್ತಿಯು ರಾಮಲಿಂಗಂ ಆಗಿದ್ದು, ಆತನು ಪ್ರತಿದಿನ ಕುಡಿದು ತನ್ನ ಪತ್ನಿ ಮಣಿಗೆ ಗಲಾಟೆ ಮಾಡುತ್ತಿದ್ದು, ತನಗೂ ಹಾಗೂ ಮಣಿಗೂ ಅಕ್ರಮ ಸಂಬಂಧ ಇದ್ದು, ಆಕೆಯು ರಾಮಲಿಂಗಂನನ್ನು ಕೊಲೆ ಮಾಡುವಂತೆ ತಿಳಿಸಿದ ಮೇರೆಗೆ ದಿನಾಂಕ 13-6-2017 ರಂದು ರಾತ್ರಿ ಸಮಯ ಸುಮಾರು 8-30 ಗಂಟೆಯಲ್ಲಿ ರಾಮಲಿಂಗಂ ರವರು ಮದ್ಯ ಸೆವಿಸಿ ಸುಂಟಿಕೊಪ್ಪ ನಗರದ ಸ್ವಾಗತ್ ಬಾರ್ ಬಳಿ ಇದ್ದವನನ್ನು  ತನ್ನ  ಜೀಪು ಕೆಎ-02 ಎನ್-8426  ರಲ್ಲಿ ಸಿಂಕೊನ ಎಸ್ಟೇಟ್ ಪಕ್ಕದ ರಸ್ತೆಯಲ್ಲಿ ಕರೆದುಕೊಂಡು ಹೋಗಿ  ಮುಂದೆ ರಾಲಿಂಗಂನ ಕುತ್ತಿಗೆಗೆ  ನೈಲಾನ್  ಹಗ್ಗದಿಂದ ಬಿಗಿದು ಕೊಲೆ ಮಾಡಿ ಆನಂತರ ಕೊಲೆಯಾದ ವ್ಯಕ್ತಿ ಯಾರೆಂದು ಪತ್ತೆಯಾಗಬಾರದೆಂದು ರಾಜಲಿಂಗಂನ ಕುತ್ತಿಗೆ ಮತ್ತು ಕಾಲುಗಳನ್ನು ಕತ್ತಿಯಿಂದ ಕಡಿದು ಬೇರ್ಪಡಿಸಿ, ತಲೆ ಮತ್ತು ಕಾಲನ್ನು ಕಡಿದ ಜಾಗದಲ್ಲಿಯೇ ಗುಂಡಿ ತೆಗೆದು ಹೂತಾಕಿದ್ದು, ಶರೀರಕ್ಕೆ ಕಲ್ಲುಗಳನ್ನು ಕಟ್ಟಿ ಸ್ವಲ್ಪ ದೂರದಲ್ಲಿದ್ದ ಕೆರೆಗೆ ಹಾಕಿರುವುದಾಗಿ ಆರೋಪಿಯು ಒಪ್ಪಿಕೊಂಡಿರುತ್ತಾನೆ.

ಕುತ್ತಿಗೆಯನ್ನು ಹೊರತೆಗೆಯುವ ಸಮಯದಲ್ಲಿ ಹಾಜರಿರುವಂತೆ ಕೊಡಗು ಜಿಲ್ಲಾ ಉಪ ದಂಡಾಧಿಕಾರಿಯವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದು, ಕೊಡಗು ಜಿಲ್ಲಾ ಉಪ ದಂಡಾಧಿಕಾರಿಯವರೊಂದಿಗೆ ಆರೋಪಿಯನ್ನು ಕೃತ್ಯ ನೆಡೆದ ಸ್ಥಳವನ್ನು ತೋರಿಸುವ ಬಗ್ಗೆ ಕರೆದುಕೊಂಡು ಹೋಗಲಾಗಿ ಆರೋಪಿ ತಾನು ಕೊಲೆ ಮಾಡಿ, ಕೈ, ಕಾಲು, ತಲೆ ಕಡಿದು ಹೂತಾಕಿದ್ದ ಜಾಗವನ್ನು ತೋರಿಸಿದ್ದು ಕೊಡಗು ಜಿಲ್ಲಾ ಉಪ ದಂಡಾಧಿಕಾರಿಯವ ಸಮಕ್ಷಮದಲ್ಲಿ ಮೃತನ ತಲೆಯನ್ನು ಹೊರತೆಗೆದು ಕ್ರಮ ಜರುಗಿಸಲಾಯಿತು. ನಂತರ ಆರೋಪಿಯು ಕೃತ್ಯಕ್ಕೆ ಉಪಯೋಗಿಸಿದ ಕಲ್ಲು, ನೈಲಾನ್ ಹಗ್ಗ ಗಳನ್ನು ಕೃತ್ಯ ನೆಡೆಸಿದ ಸ್ಥಳದಲ್ಲಿ ಅಮಾನತ್ತುಪಡಿಸಿಕೊಳ್ಳಲಾಗಿದ್ದು, ಕೃತ್ಯಕ್ಕೆ ಬಳಸಿದ ಜೀಪು ಸಂಖ್ಯೆ: ಕೆಎ-02 ಎನ್-8426 ಹಾಗೂ ಹತ್ಯಾರುಗಳನ್ನು ಹಾಗೂ ಮೃತನು ಧರಿಸಿದ್ದ ಬಟ್ಟೆಗಳನ್ನು ಸುಂಟಿಕೊಪ್ಪ ಬಳಿ ತೋರಿಸಿಕೊಟ್ಟಿದ್ದನ್ನು ಅಮಾನತ್ತುಪಡಿಸಿಕೊಳ್ಳಲಾಗಿರುತ್ತದೆ

ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಪಿ. ರಾಜೇಂದ್ರ ಪ್ರಸಾದ್ ರವರ ಮಾರ್ಗದರ್ಶನದಲ್ಲಿ ಮಡಿಕೇರಿ ಉಪವಿಭಾಗದ ಪ್ರಭಾರ ಡಿವೈಎಸ್ ಪಿ ಶ್ರೀ ನಾಗಪ್ಪ, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶ್ರೀ ಬಿ.ಆರ್. ಪ್ರದೀಪ್, ಸಿಪಿಐ ಕುಶಾಲನಗರ ಶ್ರೀ  ಕ್ಯಾತೇಗೌಡ ರವರ ನೇತೃತ್ವದಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆ ಪಿ.ಎಸ್.ಐ.ಶ್ರೀ. ಎಸ್. ಶಿವಪ್ರಕಾಶ್, ಸುಂಟಿಕೊಪ್ಪ ಠಾಣೆಯ ಪಿ.ಎಸ್.ಐ. ಶ್ರೀ ಹೆಚ್.ಎಸ್. ಬೋಜಪ್ಪ, ಸಿಬ್ಬಂದಿಯವರಾದ ಶ್ರೀ ತೀರ್ಥಕುಮಾರ್, ಕಾಳಿಯಪ್ಪ, ಕಿರಣ್, ಶ್ರೀಮತಿ ಶೋಬಾ, ಮುಸ್ತಾಫ, ಸುಧೀಶ್ ಕುಮಾರ್, ಪುಂಡರಿಕಾಕ್ಷ ರವರುಗಳು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಪ್ರಕರಣ ದಾಖಲಾಗಿ ಒಂದು ವಾರದಲ್ಲೇ ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾದ ಮೇಲ್ಕಂಡ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಪೊಲೀಸ್ ಅಧೀಕ್ಷಕರು ನಗದು ಬಹುಮಾನವನ್ನು ಘೋಷಿಸಿರುತ್ತಾರೆ. 
 
  
ಬೈಕ್ ಡಿಕ್ಕಿ ವ್ಯಕ್ತಿ ಸಾವು:

    ಮದುವೆ ಸಮಾರಂಭಕ್ಕೆ ಬಂದ ವ್ಯಕ್ತಿಯೊಬ್ಬರು ರಸ್ತೆದಾಟುವಾಗ ಬೈಕೊಂದು ಡಿಕ್ಕಿಯಾಗಿ ಸಾವಿಗೀಡಾದ ಘಟನೆ ವಿರಾಜಪೇಟೆ ಸಮೀಪದ ಬಿಟ್ಟಂಗಾಲದಲ್ಲಿ ನಡೆದಿದೆ. ವಿರಾಜಪೇಟೆ ತಾಲೋಕು ಕೊಟ್ಟಗೇರಿ ಗ್ರಾಮದ ನಿವಾಸಿ ಸೋಮಶೇಖರ್ ಎಂಬವರು ದಿನಾಂಕ 1-7-2017 ರಂದು ಸಂಜೆ  ಬಿಟ್ಟಂಗಾಲದಲ್ಲಿರುವ ಆರ್.ಕೆ.ಎಫ್. ಕಲ್ಯಾಣ ಮಂಟಪದಲ್ಲಿ ತಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಬಂದು ಮರಳಿ ಮನೆಗೆ ಹೋಗುವ ಸಲುವಾಗಿ ಸದರಿ ಕಲ್ಯಾಣ ಮಂಟಪದ ಮುಂದಿನ ರಸ್ತೆಯಲ್ಲಿ ರಸ್ತೆ ದಾಟುವಾಗ ವೇಗವಾಗಿ ಬಂದ ಮೋಟಾರ್ ಸೈಕಲ್ ವೊಂದು ಅವರಿಗೆ  ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡ ಸದರಿ ಸೋಮಶೇಖರ್ ರವರು ಸ್ಥಳದಲ್ಲೇ ಸಾವನಪ್ಪಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿ ಮೇಲೆ ಹಲ್ಲೆ:

     ದಿನಾಂಕ 01-07-17 ರಂದು ಸಮಯ ಅಪರಾಹ್ನ 3-30 ಗಂಟೆಗೆ ಸುಂಟಿಕೊಪ್ಪ- 7ನೇ ಹೊಸಕೋಟೆ ಗ್ರಾಮದ ನಿವಾಸಿ ಪಿ.ಎಸ್. ಶಿನೋಜ್ ಎಂಬವರು ಮೆಟ್ನಳ್ಳ ಜಂಕ್ಷನ್ ಅಟೊ ನಿಲ್ದಾಣದಲ್ಲಿ ನಿಂತುಕೊಂಡು ಇರುವಾಗ ಮಳೂರು ಗ್ರಾಮದ ಅಭಿ ಮತ್ತು ವಿಜಯ್ ಎಂಬವರು ಅಲ್ಲಿಗೆ ಬಂದು ಹಳೇ ದ್ವೇಷದಿಂದ ಏಕಾ ಏಕಿ ಕಬ್ಬಿಣದ ರಾಡಿನಿಂದ ಪಿ.ಎಸ್. ಶಿನೋಜ್ ರವರ ತಲೆಯ ನೆತ್ತಿಯ ಭಾಗಕ್ಕೂ ಬಲಕೈ ಮೊಣಕೈಗೂ ಹೊಡೆದು ಗಾಯಗೊಪಡಿಸಿದ್ದು ಈ ಬಗ್ಗೆ ಫಿರ್ಯಾದಿ ಪಿ.ಎಸ್. ಶಿನೋಜ್ ರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕಾರಿಗೆ ಬೈಕ್ ಡಿಕ್ಕಿ:

     ಚಲಿಸುತ್ತಿದ್ದ ಕಾರಿಗೆ ಹಿಂದಿನಿಂದ ಬಂದ ಮೋಟಾರ್ ಸೈಕಲ್ ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡು ಕಾರು ಜಖಂ ಗೊಂಡಿರುವ ಘಟನೆ ಕುಶಾಲನಗರ ಸಂಚಾರಿ ಠಾಣಾ ವ್ಯಾಪ್ತಿಯ ಬಸವನಳ್ಳಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 1-7-2017 ರಂದು ಬೆಂಗಳೂರು ಮೂಲಕ ಕೃಷ್ಣೇಗೌಡ ಎಂಬವರು ಕುಶಾಲನಗರಕ್ಕೆ ಕೆಎ-04 ಎಂಕೆ 7301 ರ ಟೋಯೋಟ ಇಟಿಯೋಸ್‌ ಕಾರಿನಲ್ಲಿ ಅವರ ಸಾಹುಕಾರಾದ ರೋಹನ್‌ ಲಾರೆನ್ಸ್‌ ಮಾರ್ಟಿಸ್‌ ರವರನ್ನು ಕರೆದುಕೊಂಡು ಬಂದು ವಾಪಸ್ಸು ಸಮಯ 11.30 ಗಂಟೆಗೆ ಬಸವನಹಳ್ಳಿ ಗ್ರಾಮದ ರಾಷ್ಟೀಯ ಹೆದ್ದಾರಿಯ ರಸ್ತೆಯಲ್ಲಿ ಹೋಗುತ್ತಿದ್ದಾಗ ಕಾರಿನ ಹಿಂದೆಯಿಂದ ಬೈಕ್‌ ಸವಾರನೊಬ್ಬ ತನ್ನ ಮೋಟಾರ್ ಸೈಕಲನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನ ಹಿಂದಿನ ಗಾಜು ಮತ್ತು ಕಾರಿನ ಹಿಂಬದಿ ಪೂರ್ಣ ಜಖಂಗೊಂಡು ಬೈಕ್ ಸವಾರ ಸಹ ಗಾಯಗೊಂಡಿದ್ದು, ಈ ಸಂಬಂಧ ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹೊಸ ಮನೆಗೆ ನಿರ್ಮಿಸಿದ ಬಾಗಿಲ ಫಲಕ ಕಳವು:

     ಶ್ರೀಮಂಗಲ ಪೊಲೀಸ್ ಠಾಣಾ ಸರಹದ್ದಿನ ಶ್ರೀಮಂಗಲ ನಗರದಲ್ಲಿ ಅಜ್ಜಮಾಡ ಸಿ. ಜಯ ಎಂಬವರು ಹೊಸದಾಗಿ ನಿರ್ಮಿಸುತ್ತಿರುವ ಮನೆಯ ಮೇಲಂತಸ್ತಿನ ಕೊಠಡಿಯಲ್ಲಿ ಬೀಟಿ ಮರದಲ್ಲಿ ಮಹಾಭಾರತದ ಗೀತೋಪದೇಶದ ಚಿತ್ರಣವನ್ನು ಕೆತ್ತನೆ ಮಾಡಿ ಇಟ್ಟಿದ್ದು ಸದರಿ ಬೀಟಿ ಮರದ ಫಲಕವನ್ನು ದಿನಾಂಕ 2-6-17 ರಿಂದ 30-6-2017ರ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಅಜ್ಜಮಾಡ ಸಿ. ಜಯ ರವರು ದಿನಾಂಕ 1-7-2017 ರಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.