Friday, August 11, 2017

ಶ್ವಾನಕ್ಕೆ ಬೈಕ್ ಡಿಕ್ಕಿ, ಮಹಿಳೆ ಸಾವು:

      ಚಲಿಸುತ್ತಿದ್ದ ಮೋಟಾರ್ ಸೈಕಲೊಂದು ಶ್ವಾನಕ್ಕೆ ಡಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು ಬೈಕಿನಿಂದ ಬಿದ್ದು ಸಾವನಪ್ಪಿದ ಘಟನೆ ಕೂಡಿಗೆ ಗ್ರಾಮದಲ್ಲಿ ನಡೆದಿದೆ. ಹುಣಸೂರು ತಾಲೂಕಿನ ಕೊಳವಿಗೆ ಗ್ರಾಮದ ಮಂಜುನಾಥ ಎಂಬವರು ದಿನಾಂಕ 10-8-2017 ರಂದು ಸಂಜೆ 6-00 ಗಂಟೆ ಸಮಯದಲ್ಲಿ ತಮ್ಮ ಬಾಪ್ತು ಮೋಟಾರ್ ಸೈಕಲಿನಲ್ಲಿ ತನ್ನ ತಾಯಿ ಸರೋಜಮ್ಮ ರವರೊಂದಿಗೆ ಹೆಬ್ಬಾಲೆ ಕಡೆಯಿಂದ ಕುಶಾಲನಗರದ ಕಡೆಗೆ ಬರುತ್ತಿದ್ದಾಗ ಸದರಿ ಮೋಟಾರ್ ಸೈಕಲ್ ನಾಯಿಯೊಂದಕ್ಕೆ ಡಿಕ್ಕಿಯಾಗಿದ್ದು, ಪರಿಣಾಮ ಬೈಕಿನ ಹಿಂದಿನ ಸೀಟಿನಲ್ಲಿ ಕುಳಿತ್ತಿದ್ದ ಸರೋಜಮ್ಮನವರು ಕೆಳಗೆ ಬಿದ್ದು, ತೀವ್ರವಾಗಿ ಗಾಯಗೊಂಡು ಸದರಿಯವರನ್ನು ಕುಶಾಲನಗರ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಸದರಿಯವರು ಸಾವನಪ್ಪಿದ್ದು, ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿನಾಕಾರಣ ವ್ಯಕ್ತಿಯ ಮೇಲೆ ಇಬ್ಬರಿಂದ ಹಲ್ಲೆ:

      ದಿನಾಂಕ 10-08-2017 ರಂದು ಸಂಜೆ 17.30 ಗಂಟೆಗೆ ವಿರಾಜಪೇಟೆ ನಗರದ ವಿಜಯನಗರದ ನಿವಾಸಿ ಆಟೋ ಚಾಲಕ ಮುಜಾಹಿರ್ ರೆಹಮಾನ್ ಎಂಬವರು ವಿರಾಜಪೇಟೆ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರಿನ ಆಟೋ ರಿಕ್ಷಾ ನಿಲ್ದಾಣದಲ್ಲಿ ತನ್ನ ಬಾಪ್ತು ಆಟೋ ರಿಕ್ಷಾವನ್ನು ನಿಲ್ಲಿಸಿಕೊಂಡು ನಿಂತಿರುವಾಗ್ಗೆ ಸದರಿಯವರ ಎರಡನೇ ಹೆಂಡತಿಯ ಸಹೋದರರಾದ ಕಲೀಲ್ ಹಾಗೂ ಸಾದಿಕ್ ರವರುಗಳು ಅಲ್ಲಿಗೆ ಬಂದು ವಿನಾಕಾರಣ ಜಗಳ ತೆಗೆದು ರಾಡಿನಿಂದ ಹಾಗೂ ಹಾಕಿ ಸ್ಟಿಕ್ ನಿಂದ ತಲೆ ಹಾಗೂ ಶರೀರಕ್ಕೆ ಹಲ್ಲೆ ನಡೆಸಿ ಗಾಯಪಡಿಸಿದ್ದು ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೈಕ್ ಗಳ ಮುಖಾಮುಖಿ, ಇಬ್ಬರಿಗೆ ಗಾಯ:

      ಎರಡು ಬೈಕ್ ಗಳು ಪರಸ್ಪರ ಡಿಕ್ಕಿಯಾಗಿ ಇಬ್ಬರು ವ್ಯಕ್ತಿಗಳು ಗಾಯಗೊಂಡ ಘಟನೆ ಕುಶಾಲನಗರ ಪಟ್ಟಣದ ಅಯ್ಯಪ್ಪ ರಸ್ತೆಯಲ್ಲಿ ನಡೆದಿದೆ. ಕುಶಾಲನಗರ ಹತ್ತಿರದ ಭುವನಗಿರಿಯಲ್ಲಿ ವಾಸವಾಗಿರುವ ಲೋಕೇಶ್ ಎಂಬವರ ಮಗ ರವಿಕುಮಾರ್ ಎಂಬವರು ಕುಶಾಲನಗರದ ಕೆ.ಬಿ. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ದಿನಾಂಕ 9-8-2017 ರಂದು ಮೋಟಾರ್ ಸೈಕಲಿನಲ್ಲಿ ಸ್ನೇಹಿತ  ಹರಿಪ್ರಸಾದ್ ನೊಂದಿಗೆ ಕುಶಾಲನಗರದ ಅಯ್ಯಪ್ಪ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಮೋಟಾರ್ ಸೈಕಲನ್ನು ಅದರ ಸವಾರ ಚಂದನ್ ರವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರವಿಕುಮಾರ್ ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕಿನಲ್ಲಿದ್ದ ಹರಿಪ್ರಸಾದ್, ಮನೋಜ್ ರವರುಗಳು ಗಾಯಗೊಂಡಿದ್ದು, ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಮಹಿಳೆ ಮೇಲೆ ನಾಲ್ವರಿಂದ ಹಲ್ಲೆ:

      ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ನಾಲ್ವರು ಸೇರಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಶನಿವಾರಸಂತೆ ಠಾಣಾ ವ್ಯಾಪ್ತಿಯ ಒಡೆಯನಪುರ ಗ್ರಾಮದ ನಿವಾಸಿ ಶ್ರೀಮತಿ ಜಿ.ಬಿ. ಸವಿತ ರವರು ದಿನಾಂಕ 7-8-2017 ರಂದು ಸಂಜೆ 8-45 ಗಂಟೆಯ ಸಮಯದಲ್ಲಿ ತಮ್ಮ ಮನೆಯಲ್ಲಿರುವಾಗ್ಗೆ ಅವರ ಪತಿ ಬಸವರಾಜನವರ ಸಹೋದರ ರಾಮಯ್ಯ, ರಾಮಯ್ಯನವರ ಪತ್ನಿ ಸುಮಿತ್ರ, ಮಕ್ಕಳಾದ ಸ್ವಾತಿ ಮತ್ತು ಭೂಮಿಕಾ ರವರುಗಳು ಬಂದು ಜಿ.ಬಿ.ಸವಿತರವರನ್ನು ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ನಡೆಸಿ, ಕೊಲೆಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ನಕಲಿ ಸಹಿಯನ್ನು ಮಾಡಿ ವಂಚನೆ:

     ಮಡಿಕೇರಿ ನಗರದ ಮುತ್ತಪ್ಪ ದೇವಸ್ಥಾನದ ಹತ್ತಿರ ವಾಸವಾಗಿರುವ ಶ್ರೀಮತಿ ಎಂ.ಸಿ. ಪಾರ್ವತಿ ಎಂಬವರ ಪತಿ ಎಂ.ಎನ್. ಕಾರ್ಯಪ್ಪನವರ ಕುಟುಂಬದ ಆಸ್ತಿಯು ವಿರಾಜಪೇಟೆ ತಾಲೋಕು ಬೊಳ್ಳುಮಾಡು ಗ್ರಾಮದಲ್ಲಿದ್ದು ಅವರ ಕುಟುಂಬದವರೇ ಎಂ.ಎಸ್. ಮುದ್ದಪ್ಪನವರು ನಕಲಿ ವಿಭಾಗ ಪತ್ರವನ್ನು ತಯಾರಿಸಿ ಫಿರ್ಯಾದಿ ಪಾರ್ವತಿ ಹಾಗು ಅವರ ಮಗಳಾದ ಶ್ರೀಮತಿ ಸವಿತಾ ರವರ ಸಹಿಯನ್ನು ಪೋರ್ಜರಿ ಮಾಡಿ ಜಾಗಕ್ಕೆ ಸಂಬಂಧಿಸಿದ ಆರ್.ಟಿ.ಸಿ.ಯನ್ನು ಪಡೆದು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.