Tuesday, December 5, 2017

 ಕೊಲೆ ಪ್ರಕರಣ, ಜೀವಾವಧಿ ಶಿಕ್ಷೆ 
                          ಕೊಲೆ ಪ್ರಕರಣವೊಂದರಲ್ಲಿ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ದಿನಾಂಕ 28/01/2017ರಂದು ಗೋಣಿಕೊಪ್ಪ ನಗರದಲ್ಲಿ ಮೋಹನ್ ಎಂಬಾತನೊಂದಿಗೆ ಪ್ರಕರಣದ ಆರೋಪಿ ಗಿರೀಶ್‌ ಎಂಬಾತನು ಹಣದ ವಿಚಾರದಲ್ಲಿ ಜಗಳವಾಡಿ ಚೂರಿಯಿಂದ ಮೋಹನನ ಹೊಟ್ಟೆ, ಕುತ್ತಿಗೆಗೆ ತೀವ್ರವಾಘಿ ಇರಿದು ಗಾಯಗೊಳಿಸಿದ ಕಾರಣ ಗಂಭೀರವಾಗಿ ಗಾಯಗೊಂಡ ಮೋಹನನನ್ನು ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದು ಆಸ್ಪತ್ರೆಯಲ್ಲಿ ಗಾಯಾಳು ಮೋಹನ ಮೃತನಾದ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಮೊ.ಸಂ.8/2017 ವಿಧಿ 302 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ಗೋಣಿಕೊಪ್ಪ ವೃತ್ತ ನಿರೀಕ್ಷಕರಾ ಪಿ.ಕೆ.ರಾಜುರವರು ಪ್ರಕರಣದ ತನಿಖೆ ನಡೆಸಿದ್ದು ಆರೋಪಿ ಜಿ.ಗಿರೀಶನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. 

                       ನಂತರದ ವೃತ್ತ ನಿರೀಕ್ಷಕರಾದ ಸಿ.ಎನ್‌.ದಿವಾಕರ್‌ರವರು ತನಿಖೆಯನ್ನು ಪೂರೈಸಿ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದ್ದರು. ಪ್ರಕರಣದ ನ್ಯಾಯಾಲಯ ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಕಾರ್ಯ ನಿರ್ವಹಣೆ ವಿರಾಜಪೇಟೆ) ದ ನ್ಯಾಯಾಧೀಶರಾದ ಮೋಹನ್‌ ಪ್ರಭುರವರು ಆರೋಪಿಯ ವಿರುದ್ದ ಆರೋಪವು ಸಾಬೀತಾದ ಕಾರಣ ದಿನಾಂಕ 05/12/2017ರಂದು ತೀರ್ಪು ನೀಡಿ ಆರೋಪಿ ಗಿರೀಶನಿಗೆ ಸಾದಾ ಜೀವಾವಧಿ ಶಿಕ್ಷೆ ಹಾಗೂ ರೂ.5,000/- ದಂಡ ವಿಧಿಸಿದ್ದು ದಂಡ ಕಟ್ಟಲು ವಿಫಲನಾದಲ್ಲಿ ಮತ್ತೂ ಆರು ತಿಂಗಳು ಸಾದಾ ಕಾರಾಗೃಹ ವಾಸದ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಮಹಂತಪ್ಪನವರು ವಾದ ಮಂಡಿಸಿದ್ದರು.
 
ಕಾಡು ಪ್ರಾಣಿ ಧಾಳಿ, ವ್ಯಕ್ತಿ ಸಾವು
                           ಸೋಮವಾರಪೇಟೆ ಬಳಿಯ ನಗರೂರು ತೋಟದಲ್ಲಿ ಕಾವಲುಗಾರರಾಗಿ ಕೆಲಸ ಮಾಡಿಕೊಂಡಿದ್ದ ತಿಮ್ಮಪ್ಪ ಎಂಬ ವ್ಯಕ್ತಿಯು ದಿನಾಂಕ 02/12/2017ರಂದು ಮನೆಯಿಂದ ಕೆಲಸಕ್ಕೆಂದು ಹೋಗಿದ್ದು ದಿನಾಂಕ 03/12/2017ರ ರಾತ್ರಿಯಾದರೂ ಮನೆಗೆ ಬಾರದ ಕಾರಣ ಅವರ ಮಗ ಹರೀಶರವರು ತಂದೆ ತಿಮ್ಮಪ್ಪನವರನ್ನು ಹುಡುಕಿಕೊಂಡು ನಗರೂರು ತೋಟದ ಲೈನ್ ಮನೆಗೆ ಹೋದಾಗ ಅಲ್ಲಿ ಲೈನ್ ಮನೆಯ ವೆರಾಂಡಾದಲ್ಲಿ ತಿಮ್ಮಪ್ಪನವರ ಮೃತದೇಹ ಕಾಣಿಸಿದ್ದು ಮುಖದ ಭಾಗವನ್ನು ಯಾವುದೋ ಕಾಡು ಪ್ರಾಣಿ ಸಂಪೂರ್ಣವಾಗಿ ತಿಂದಿರುವುದು ಗೋಚರಿಸಿದ್ದು  ಕಾಡು ಪ್ರಾಣಿಯ ಧಾಳಿಯಿಂದ ತಿಮ್ಮಪ್ಪನವರು ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪಘಾತ ಗಾಯಾಳುಗಳ ಸಾವು
                             ದಿನಾಂಕ 03/12/2017ರಂದು ಕುಶಾಲನಗರ ಬಳಿಯ ಗುಮ್ಮನಕೊಲ್ಲಿ ನಿವಾಸಿ ರಫೀಕ್ ಎಂಬವರು ಲಾರಿಯಲ್ಲಿ ಕೂಡಿಗೆ ಮಾರ್ಗವಾಗಿ ಯಲಕನೂರಿಗೆ ಹೋಗುವಾಗ ಕೂಡಿಗೆ ಡೈರಿ ಬಳಿ ಎದುರುಗಡೆಯಿಂದ ಒಂದು ಮೋಟಾರು ಸೈಕಲಿನಲ್ಲಿ ಇಬ್ಬರು ವ್ಯಕ್ತಿಗಳು ಅತಿ ವೇಗ ಮತ್ತು ಅಜಾಗರೂಕತೆಯಿಂದ ಬೈಕನ್ನು ಚಾಲಿಸಿಕೊಂಡು ಬಂದು ಬೈಕ್ ರಸ್ತೆಯಲ್ಲಿ ಬಿದ್ದು ರಸ್ತೆಯನ್ನು ಉಜ್ಜಿಕೊಂಡು ಹೋಗಿ ಲಾರಿಯ ತಳಭಾಗದಲ್ಲಿ ಸಿಕ್ಕಿಕೊಂಡ ಪರಿಣಾಮ ತೀವ್ರ ಗಾಯಗೊಂಡ ಇಬ್ಬರು ಸವಾರರನ್ನು ಕುಶಾಲನಗರ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. 
                           ಗಾಯಾಳುಗಳಾದ ಬಸವನತ್ತೂರಿನ ಪ್ರದೀಶ್‌ ಹಾಗೂ ವಿಜಯನಗರದ ರವಿ ಕುಮಾರ್ ಎಂಬವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ದಿನಾಂಕ 03/12/2017ರಂದು ಮೈಸೂರಿಗೆ ಸಾಗಿಸುವಾಗ ಮಾರ್ಗ ಮಧ್ಯೆ ಇಬ್ಬರೂ ಮೃತಪಟ್ಟಿದ್ದು ಕುಶಾಲನಗರ ಸಂಚಾರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಪಾದಚಾರಿ ಮಹಿಳೆಗೆ ಕಾರು ಡಿಕ್ಕಿ
                          ದಿನಾಂಕ 28/11/2017ರಂದು ಶನಿವಾರಸಂತೆ ಬಳಿಯ ಅಜ್ಜಳ್ಳಿ ನಿವಾಸಿ ಲಕ್ಷ್ಮಿ ಎಂಬವರು ಸಂಜೆ ವೇಳೆ ಕೆಲಸ ಮುಗಿಸಿ ಬೀಟಿಕಟ್ಟೆಯಿಂದ ಶನಿವಾರಸಂತೆಗೆ ಒಳ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಎದುರಿನಿಂದ ಕೆಎ-01-ಎಂಎಲ್-2153 ರ ಕಾರನ್ನು ಅದರ ಚಾಲಕ ಅಜ್ಜಳ್ಳಿ ಗ್ರಾಮದ ಮಿಥುನ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಲಕ್ಷ್ಮಿರವರಿಗೆ ಡಿಕ್ಕಿಪಡಿಸಿದ ಪರಿಣಾಮ ಲಕ್ಷ್ಮಿರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆಯ ಕೊಲೆ 
                           ದಿನಾಂಕ 03/12/2017ರಂದು ಶನಿವಾರಸಂತೆ ಬಳಿಯ ಮಾಲಂಬಿ ಬಳಿಯ ಮಲ್ಲೇಶ್ವರ ಅರಣ್ಯ ಪ್ರದೇಶದ ಅಂಚಿನಲ್ಲಿ ವಾಸವಿರುವ ಜೇನು ಕುರುಬರ ರಮೇಶ ಎಂಬಾತನು ಆತನೊಂದಿಗೆ ವಾಸವಿದ್ದ ಶಾರದಾ ಎಂಬ ಮಹಿಳೆಯ ಹಣೆಯ ಭಾಗಕ್ಕೆ ಯಾವುದೋ ಹರಿತ ಆಯುಧದಿಂದ ಕತ್ತರಿಸಿದಂತೆ ಗಾಯಮಾಡಿ ಆಕೆಯನ್ನು ಕೊಲೆಗೈದು ತಲೆ ಮರೆಸಿಕೊಂಡಿರುವುದಾಗಿ ಮಾಲಂಬಿ ನಿವಾಸಿ ಎಂ.ಸಿ.ಗಂಗಾಧರ ಎಂಬವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಮಹಿಳೆಯ ಕೊಲೆಗೆ ಕಾರಣ ತಿಳಿದು ಬಂದಿರುವುದಿಲ್ಲ.

ಹಲ್ಲೆ ಪ್ರಕರಣ
                            ದಿನಾಂಕ 03/12/2017ರಂದು ಸಂಪಾಜೆ ಬಳಿಯ ಪುತ್ಯ ಪೆರಾಜೆ ನಿವಾಸಿಗಳಾದ ಕಲ್ಪನಾ ಮತ್ತು ಆಕೆಯ ಪತಿ ಚಿದಂಬರವರು ಮನೆಯಲ್ಲಿರುವಾಗ ಅಲ್ಲಿಗೆ ಬಂದ ಕಲ್ಪನಾರವರ ಸಂಬಂಧಿ ಮಹಾಬಲರವರೊಂದಿಗೆ ಯಾವುದೋ ಕಾರಣಕ್ಕೆ ಮಾತಿಗೆ ಮಾತು ಬೆಳೆದಿದ್ದು ಈ ಸಮಯದಲ್ಲಿ ಮಹಾಬಲರವರ ಮಗ ತಿರುಮಲ ಎಂಬವರು ಚಿದಂಬರವರ ಮೇಲೆ ಕಲ್ಲು ಎಸೆದಿದ್ದು ಆ ಕಲ್ಲು ಕಲ್ಪನಾರವರಿಗೆ ತಾಗಿ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಮೇಲೆ ಹಲ್ಲೆ
                            ದಿನಾಂಕ 03/12/2017ರಂದು ವಿರಾಜಪೇಟೆ ಬಳಿಯ ಕರಡ ಗ್ರಾಮದ ಕೀಮಲೆ ಕಾಡು ನಿವಾಸಿ ಹೆಚ್‌.ಎ.ಗಣೇಶ ಮತ್ತು ಆತನ ಪತ್ನಿ ಪವಿತ್ರಾರವರ ಮೇಲೆ ಅದೇ ಗ್ರಾಮದ ನಿವಾಸಿಗಳಾದ ಮಂಜುನಾಥ ಎಂಬವರು ಕ್ಷುಲ್ಲಕ ಕಾರಣಕ್ಕೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                      ದಿನಾಂಕ 04/12/2017ರಂದು ವಿರಾಜಪೇಟೆ ಬಳಿಯ ರುದ್ರಗುಪ್ಪೆ ನಿವಾಸಿ ಕೊಂಗಾಂಡ ತಿಮ್ಮಯ್ಯ ಎಂಬವರು ಅವರ ಮನೆಯ ಸಮೀಪದ ಕೆರೆಯ ಬಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ತಿಮ್ಮಯ್ಯ ಸುಮಾರು ಆರು ತಿಂಗಳುಗಳಿಂದ ಶ್ವಾಸಕೋಶ ಕಾಯಿಲೆಯಿಂದ ನರಳುತ್ತಿದ್ದು ಈ ಕಾರಣಕ್ಕೆ ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.