Sunday, December 3, 2017

ವಾಹನ ಕಳವು:
     ರಸ್ತೆ ಬದಿ ನಿಲ್ಲಿಸಿದ್ದ ಪಿಕ್ ಅಪ್ ವಾಹನವೊಂದನ್ನು ಕಳ್ಳರು ಕಳವು ಮಾಡಿದ ಘಟನೆ ಸೋಮವಾರಪೇಟೆ ನಗರದಲ್ಲಿ ನಡೆದಿದೆ. ಸೋಮವಾರಪೇಟೆ ನಗರದ ಎಂ.ಡಿ. ಬ್ಲಾಕ್ ನಿವಾಸಿ ಜಿ.ಎಸ್. ಮೋಹನ ಎಂಬವರು ದಿನಾಂಕ 30-11-2017ರ ರಾತ್ರಿ 7-30 ಗಂಟೆಗೆ ಸೋಮವಾರಪೇಟೆ ನಗರದ ಮಡಿಕೇರಿ ರಸ್ತೆಯ ನಿಶಾಂತ್ ಕಾಫಿ ಡಿಪೋ ಮುಂದೆ ತಮ್ಮ ಬಾಪ್ತು ಪಿಕ್ ಅಪ್ ವಾಹನವನ್ನು ನಿಲ್ಲಿಸಿ ತಮ್ಮ ಮನೆಗೆ ಹೋಗಿದ್ದು, ದಿನಾಂಕ 1-12-2017 ರಂದು ಬೆಳಿಗ್ಗೆ 7-30 ಗಂಟೆ ಸಮಯದಲ್ಲಿ ಸದರಿ ಜಿ.ಎಸ್. ಮೋಹನ್ ರವರು ತಾವು ತಮ್ಮ ವಾಹನವನ್ನು ನಿಲ್ಲಿಸಿದ್ದಲ್ಲಿಗೆ ಹೋಗಿ ನೋಡಿದಾಗ ಯಾರೋ ಕಳ್ಳರು ಸದರಿ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡುಬಂದಿದ್ದು, ಈ ಸಂಬಂಧ ಸದರಿಯವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿನಾಕಾರಣ ವ್ಯಕ್ತಿ ಮೇಲೆ ಹಲ್ಲೆ:

     ಸೋಮವಾರಪೇಟೆ ತಾಲೋಕು, ಬಸವನಳ್ಳಿ ಗ್ರಾಮದ ಆಶ್ರಮ ಶಾಲೆ ವಸತಿ ಗೃಹದಲ್ಲಿ ವಾಸವಾಗಿರುವ ಕೆ.ಎಸ್. ರವಿ ಎಂಬವರು ದಿನಾಂಕ 30/11/2017 ರಂದು ಕುಶಾಲನಗರದಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ರಾತ್ರಿ 8.30 ಗಂಟೆಗೆ ವಾಪಾಸು ಬಸವನಹಳ್ಳಿಯ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ್ಗೆ ಅವರ ಪರಿಚಯದ ಮನು ಎಂಬಾತ ತನ್ನ ಕೆಎ 12 ಬಿ 3897 ರ ಟಾಟಾ ಏಸ್ ವಾಹನದಲ್ಲಿ ಬಂದು ಕೆ.ಎಸ್. ರವಿಯವರನ್ನು ಮನೆಯ ಬಳಿ ಬಿಡುವುದಾಗಿ ಹೇಳಿ ತನ್ನ ವಾಹನದಲ್ಲಿ ಹತ್ತಿಸಿಕೊಂಡು ಮನೆಗೆ ಹೋಗುವಾಗ್ಗೆ ದಾರಿ ಮದ್ಯೆ ವಾಹನದಲ್ಲಿ ವಿನಾ ಕಾರಣ ಅವಾಚ್ಯ ಶಬ್ದಗಳಿಂದ ಬೈದು ಮುಖಕ್ಕೆ ಕೈಯಿಂದ ಹಲ್ಲೆ ಮಾಡಿ ಕೈಗೆ ಕೀಯಿಂದ ಗಾಯಗೊಳಿಸಿ ನಂತರ ಮನೆಯ ಬಳಿ ಬಿಟ್ಟಿದ್ದು, ವಾಹನದಿಂದ ಇಳಿಸುವಾಗ್ಗೆ ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿಗೆ ಬಸ್ ಡಿಕ್ಕಿ ಒಬ್ಬನಿಗೆ ಗಾಯ:

      ದಿನಾಂಕ 02-12-2017 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೋಕಿನ ಅರಂತೋಡು ಗ್ರಾಮದ ಶಶಾಂಕ ಸೋನ ಎಂಬವರು ತಮ್ಮ ಬಾಪ್ತು ಕೆಎ-04-ಎಂಎಲ್-2198 ರೆನಾಲ್ಟ್ ಕಾರಿನಲ್ಲಿ ಅವರ ತಮ್ಮ ರಾಜೇಶ್ ಮತ್ತು ಬಾವ ಪ್ರಾರ್ಥನ್ ರವರನ್ನು ಬೆಂಗಳೂರಿನಿಂದ ಕರೆದುಕೊಂಡು ಕುಶಾಲನಗರ ಮಾರ್ಗವಾಗಿ ಸುಳ್ಯ ಕಡೆಗೆ ಹೋಗುತ್ತಿರುವಾಗ ಸಮಯ ಬೆಳಗ್ಗೆ 07-30 ಗಂಟೆಗೆ ಆನೆಕಾಡು ಬಳಿ ತಲುಪಿದಾಗ ಮಡಿಕೇರಿ ಕಡೆಯಿಂದ ಬಂದ SRS ಟ್ರಾವೆಲ್ಸ್ ನ ಬಸ್ಸನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಶಶಾಂಕ ಸೋನರವರು ಚಾಲನೆ ಮಾಡುತ್ತಿದ್ದ ಕಾರಿನ ಮುಂಬಾಗಕ್ಕೆ ಡಿಕ್ಕಿ ಪಡಿಸಿ ಬಸ್‌ ನಿಲ್ಲಿಸದೆ ಹೋಗಿದ್ದು, ಬಸ್ ಡಿಕ್ಕಿ ಪಡಿಸಿದ ಪರಿಣಾಮ ಕಾರಿನಲ್ಲಿದ್ದ ಪ್ರಾರ್ಥನ್ ರವರ ಕಾಲುಗಳಿಗೆ ಗಾಯಗಳಾಗಿದ್ದು, ಈ ವಿಚಾರವಾಗಿ ಶಶಾಂಕ ಸೋನರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಅಪಘಾತ, ನಾಲ್ವರಿಗೆ ಗಾಯ:
 
    ಬೆಂಗಳೂರಿನಿಂದ ಕೊಡಗು ಜಿಲ್ಲೆಗೆ ಪ್ರವಾಸಕ್ಕೆ ಬಂದ ಕಾರೊಂದು ಅಪಘಾತಕ್ಕೀಡಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕು ಜನರು ಗಾಯಗೊಂಡ ಘಟನೆ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಅಂದಗೋವೆ ಜಂಕ್ಷನ್ ನಲ್ಲಿ ಸಂಭವಿಸಿದೆ. ಬೆಂಗಳೂರಿನ ನಿವಾಸಿ ಎಸ್. ಸಂದೀಪ್ ಎಂಬವರು ತನ್ನ ಸ್ನೇಹಿತರಾದ ಕೆ. ವರುಣ್ ಕುಮಾರ್, ಆರ್. ನಿತಿನ್ ಮತ್ತು ಪ್ರತಿಭಾ ರವರುಗಳು ದಿನಾಂಕ 1-12-2017 ರಂದು ಬೆಂಗಳೂರಿನಿಂದ ಕೊಡಗು ಜಿಲ್ಲೆಯ ಮಡಿಕೇರಿಗೆ ಕಾರಿನಲ್ಲಿ ಪ್ರವಾಸಕ್ಕೆ ಬಂದಿದ್ದು, ದಿನಾಂಕ 2-12-2017ರ ಬೆಳಗಿನ ಜಾವ 2-30 ಗಂಟೆಗೆ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಅಂದಗೋವೆ ಜಂಕ್ಷನ್ ನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಪರಿಣಾಮ ಕಾರು ರಸ್ತೆಯ ಪಕ್ಕದ ಕಾಫಿ ತೋಟದೊಳಗೆ ಹೋಗಿ ಮಗುಚಿಬಿದ್ದು, ಪರಿಣಾಮವಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೇಲ್ಕಾಣಿಸಿದ ನಾಲ್ಕು ಜನರು ಗಾಯಗೊಂಡು ಸದರಿಯವರನ್ನು ಮಡಿಕೇರಿ ಸರಕಾರಿ ಅಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರಗಳ್ಳತನ:

     ಸಿದ್ದಾಪುರ ಠಾಣಾ ವ್ಯಾಪ್ತಿಯ ಗುಹ್ಯ ಗ್ರಾಮದ ನಿವಾಸಿ ಶ್ರೀಮತಿ ಸಂದ್ಯಾ ಎಂಬವರು ದಿನಾಂಕ 02-12-2017 ರಂದು 11.00 ಗಂಟೆಗೆ ತಮ್ಮ ಮನೆಯಲ್ಲಿರುವಾಗ್ಗೆ ಮನೆಯ ಮುಂಭಾಗ ರಸ್ತೆಯಿಂದ ಒಬ್ಬ ವ್ಯಕ್ತಿ ಸಂಧ್ಯಾ ಎಂಬುದಾಗಿ ಕೂಗಿ ಕರೆದು ಸಂದ್ಯಾರವರು ಹೋಗಿ ನೋಡಲಾಗಿ ಸದರಿ ವ್ಯಕ್ತಿ 'ನಿಮ್ಮ ತಂದೆಯವರಿಗೆ ಕೊರಿಯರ್ ಇದೆ' ಎಂದು ಹೇಳಿ, ತಂದೆಯ ಮನೆ ತೋರಿಸುವಂತೆ ತಿಳಿಸಿದಾಗ ಸಂದ್ಯಾರವರು ತನ್ನ ತಂದೆಯ ಮನೆಗೆ ಹೋಗುವ ದಾರಿಯನ್ನು ತೋರಿಸುವ ಸಲುವಾಗಿ ಗುಹ್ಯ ಗ್ರಾಮದಿಂದ ಅಗ್ನಿದೇವಿ ದೇವಸ್ಥಾನದ ಜಂಕ್ಷನ್ ಕಡೆಗೆ ಹೋಗುವ ಕಾಲುರಸ್ತೆ ಕಡೆಯಿಂದ ತಂದೆಯ ಮನೆ ತೋರಿಸಲು ಹೋಗುತ್ತಿರುವಾಗ ಗದ್ದೆಯ ಮೇಲ್ಭಾಗ ಒಂದು ಮಾವಿನ ಮರದ ಪಕ್ಕ ಆ ವ್ಯಕ್ತಿಯು ಸಂಧ್ಯಾರವರ ಕುತ್ತಿಗೆಯಿಂದ 1 ಲಕ್ಷ ರೂ. ಬೆಲೆಬಾಳುವ ಚೈನನ್ನು ಕಿತ್ತುಕೊಂಡು ಓಡಿ ಹೋಗಿದ್ದು, ಆತನು ಕಪ್ಪು ಬಣ್ಣದ ಮುಖವಾಡ ಹಾಕಿ ತಲೆಗೆ ಹೆಲ್ಮೆಟ್ ಹಾಕಿದ್ದು ಯಾರು ಎಂದು ತಿಳಿಯಲಿಲ್ಲ ಎಂಬುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಳೆ ಕೈಗೊಂಡಿದ್ದಾರೆ.

ಅಂಗಡಿ ಬೀಗ ಮುರಿದು ಕಳವು:

   ವಿರಾಜಪೇಟೆ ಪೊಲೀಸ್ ಠಾಣಾ ಸರಹದ್ದಿನ ಮೀನುಪೇಟೆಯಲ್ಲಿರುವ ಮಹಮ್ಮದ್ ಸಿ.ವಿ ರವರು ನಡೆಸುತ್ತಿರುವ ಎ.ಪಿ.ಇ ಸ್ಟೋರ್ ಅಂಗಡಿ - ಹೊಟೇಲ್ ಗೆ ದಿನಾಂಕ 29-11-2017 ರ ರಾತ್ರಿ ಯಾರೋ ಕಳ್ಳರು ಅಂಗಡಿ ಹಾಗು ಹೋಟೇಲ್ ನ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಒಳಗೆ ಪ್ರವೇಶ ಮಾಡಿ ಅಂಗಡಿಯಲ್ಲಿದ್ದ 20000/- ನಗದು, ನಾಲ್ಕು ಡೆಮೋ ನೋಕಿಯಾ ಮೊಬೈಲ್‌ ಮತ್ತು ಬಂಡಾರದ ಡಬ್ಬದಲ್ಲಿದ್ದ ರೂ.500/- ಗಳನ್ನು ಕಳ್ಳತನ ಮಾಡಿಕೊಂಡ ಹೋಗಿದ್ದು ಈ ಸಂಬಂಧ ಫಿರ್ಯಾದಿ ಮಹಮ್ಮದ್ ಸಿ.ವಿ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.