Tuesday, January 30, 2018

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ
                      ಕೊಲೆ ಪ್ರಕರಣವೊಂದರಲ್ಲಿ ಆರೋಪಿಗೆ ಅಪರ ಜಿಲ್ಲಾ ಮತ್ತು ಸತ್ರೆ ನ್ಯಾಯಾಲಯ, ಮಡಿಕೇರಿ (ಕಾರ್ಯ ನಿರ್ವಹಣೆ ವಿರಾಜಪೇಟೆ) ಯು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

                       ಪೊನ್ನಂಪೇಟೆ ಬಳಿಯ ನಿಟ್ಟೂರು ಗ್ರಾಮದ ಮಲ್ಲೂರು ನಿವಾಸಿ ಜೇನು ಕುರುಬರ ಕರಿಯ ಎಂಬಾತನು ಪಾನಮತ್ತನಾಗಿ ಆತನ ಪತ್ನಿ ಜಯಮಾಲ ಎಂಬಾಕೆಯನ್ನು ದಿನಾಂಕ 01/12/2015ರಂದು ರಾತ್ರಿ ಕುತ್ತಿಗೆ ಹಿಚುಕಿ ನಂತರ ಮೈಮೇಲೆ ಸೀಮೆಣ್ಣೆ ಸುರಿದು ಬೆಂಕಿ ಹಚ್ಚಿದ್ದು ತೀವ್ರವಾಗಿ ಗಾಯಗೊಂಡ ಜಯಮಾಲ ನೀಡಿದ ಹೇಳಿಕೆಯ ಮೇರೆಗೆ ದಿನಾಂಕ 02/12/2015ರಂದು ಪೊನ್ನಂಪೇಟೆ ಠಾಣೆಯಲ್ಲಿ ಮೊ.ಸಂ.124/2015 ವಿಧಿ 307 ಐಪಿಸಿ ಪ್ರಕಾರ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ನಂತರ ಗಾಯಾಳು ಜಯಮಾಲ ವೈದ್ಯಕೀಯ ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ದಿನಾಂಕ 06/12/2015ರಂದು ಮೃತಳಾಗಿದ್ದು ಮೊಕದ್ದಮೆಗೆ ವಿಧಿ 302 ಐಪಿಸಿಯನ್ನು ಅಳವಡಿಸಿಕೊಂಡು ಆಗಿನ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಪಿ.ಕೆ.ರಾಜುರವರು ತನಿಖೆಯನ್ನು ಕೈಗೊಂಡಿದ್ದರು. ತನಿಖಾಧಿಕಾರಿಯಾದ ಸಿಪಿಐ ಪಿ.ಕೆ.ರಾಜುರವರು ದಿನಾಂಕ 16/03/2016ರಂದು ಆರೋಪಿ ಜೇನುಕುರುಬರ ಕರಿಯನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

                         ಆಗಿನ ಗೋಣಿಕೊಪ್ಪ ವೃತ್ತ ನಿರೀಕ್ಷಕರಾಗಿದ್ದ ಹಾಲಿ ಕುಟ್ಟ ವೃತ್ತ ನಿರೀಕ್ಷಕರಾದ ಪಿ.ಕೆ.ರಾಜುರವರು ಪ್ರಕರಣದ ತನಿಖೆಯನ್ನು ಪೂರೈಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಕಾಲದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್‌, ಐಪಿಎಸ್ ಹಾಗೂ ವಿರಾಜಪೇಟೆ ಪೊಲೀಸ್‌ ಉಪ ಅಧೀಕ್ಷಕರಾದ ನಾಗಪ್ಪರವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಪಿ.ಕೆ.ರಾಜು, ಸಿಪಿಐರವರು ಹಾಗೂ ಸಿಬ್ಬಂದಿಗಳು ಪ್ರಕರಣದ ಸಾಕ್ಷಿದಾರರಿಗೆ ಸೂಕ್ತ ತಿಳುವಳಿಕೆಯನ್ನು ನೀಡಿ ನ್ಯಾಯಾಲಯದಲ್ಲಿ ಆರೋಪವು ಸಾಬೀತಾಗುವಲ್ಲಿ ಯಶಸ್ವಿಯಾಗಿರುತ್ತಾರೆ.

                      ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಡಿಕೇರಿ (ಕಾರ್ಯನಿರ್ವಹಣೆ ವಿರಾಜಪೇಟೆ)ಯ ನ್ಯಾಯಾಧೀಶರಾದ ಶ್ರೀ ಮೋಹನ್‌ ಪ್ರಭುರವರು ದಿನಾಂಕ 30/01/2018ರಂದು ಪ್ರಕರಣದ ಆರೋಪಿ ಜೇನು ಕುರುಬರ ಕರಿಯ, ತಂದೆ ಪೌತಿ ತಿಮ್ಮ, ಕುಂಬಾರಕಟ್ಟೆ ಹಾಡಿ, ಮಲ್ಲೂರು, ನಿಟ್ಟೂರು ಗ್ರಾಮ ಈತನಿಗೆ ಸಾದಾ ಜೀವಾವಧಿ ಶಿಕ್ಷೆ ಹಾಗೂ ರೂ.10,000/- ದಂಡ ವಿಧಿಸಿದ್ದು ದಂಡ ಕಟ್ಟಲು ವಿಫಲನಾದಲ್ಲಿ ಮತ್ತೂ ಆರು ತಿಂಗಳು ಸಾದಾ ಕಾರಾಗೃಹ ವಾಸದ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶ್ರೀ ಮಹಾಂತಪ್ಪನವರು ವಾದ ಮಂಡಿಸಿದ್ದರು.
 
ವ್ಯಕ್ತಿ ಆತ್ಮಹತ್ಯೆ
                            ದಿನಾಂಕ 29/01/2018ರಂದು ಶನಿವಾರಸಂತೆ ನಿವಾಸಿ ನಿಶಾಂತ್ ಎಂಬ ಯುವಕನು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತ ನಿಶಾಂತ್‌ನ ತಂದೆ ಚಂದ್ರಶೇಖರ್ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪಾದಚಾರಿಗೆ ಬೈಕ್ ಡಿಕ್ಕಿ
                        ದಿನಾಂಕ 29/01/2018ರಂದು ಬೆಳಿಗ್ಗೆ ಸುಂಟಿಕೊಪ್ಪ ನಿವಾಸಿ ಅಬ್ದುಲ್ ಗಫೂರ್ ಎಂಬವರು ಪಟ್ಟಣದ ಹೆದ್ದಾರಿಯಲ್ಲಿರುವ ಸೂರ್ಯ ಹೋಟೆಲ್ ಬಳಿ ನಡೆದುಕೊಂಡು ಹೋಗುತ್ತಿರುವಾಗ ಕುಶಾಲನಗರ ಕಡೆಯಿಂದ ಒಂದು ನಂಬರ್‌ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಮೋಟಾರು ಬೈಕನ್ನು ಅದರ ಚಾಲಕ ಅತಿ ವೇಗ ಮತ್ತು ಆಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅಬ್ದುಲ್ ಗಫೂರ್‌ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರಿಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಮಡಿಕೇರಿಯ ಆಸ್ಪತ್ರೆಗೆ ಸಾಗಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 ಬೈಕಿಗೆ ಕಾರು ಡಿಕ್ಕಿ
                       ದಿನಾಂಕ 29/01/2018ರಂದು ಸೋಮವಾರಪೇಟೆ ಬಳಿಯ ಮೂವತೊಕ್ಲು ನಿವಾಸಿ ಚಂದ್ರ ಎಂಬವರು ಅವರ ಕೆಎ-12-188ರ ಮೋಟಾರು ಬೈಕಿನಲ್ಲಿ ಹೊಳೆನರಸೀಪುರಕ್ಕೆ ಹೋಗುತ್ತಿರುವಾಗ ಕೋವರ್‌ಕೊಲ್ಲಿ ಬಳಿ ಒಂದು ಮಾರುತಿ ವ್ಯಾನನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಚಂದ್ರರವರು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿ ವ್ಯಾನನ್ನು ನಿಲ್ಲಿಸದೆ ಹೊರಟು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.