Sunday, January 21, 2018

ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ
                     ಕೊಲೆ ಪ್ರಕರಣವೊಂದರಲ್ಲಿ ನ್ಯಾಯಾಲಯವು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ದಿನಾಂಕ 27/12/2015ರಂದು ಕುಟ್ಟ ಠಾಣಾ ವ್ಯಾಪ್ತಿಯ ಕೋತೂರು ಗ್ರಾಮದ ಬೊಮ್ಮಾಡು ಹಾಡಿಯ ನಿವಾಸಿ ಕರಿಯಣ್ಣ ಎಂಬಾತನ ಮೇಲೆ ಜೇನುಕುರುಬರ ಬೊಳ್ಳ, ನಾಗಪ್ಪ ಮತ್ತು ದಾದು ಎಂಬವರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದು ಗಾಯಾಳು ಕರಿಯಣ್ಣ ಆಸ್ಪತ್ರೆಯಲ್ಲಿ ಮೃತನಾಗಿ ಆರೋಪಿಗಳ ವಿರುದ್ದ ಕುಟ್ಟ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡ ಕುಟ್ಟ ವೃತ್ತ ನಿರೀಕ್ಷಕ ಸಿ.ಎನ್.ದಿವಾಕರ್‌ರವರು ತನಿಖೆ ಪೂರೈಸಿ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ದ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. 
                      ಪ್ರಕರಣದ ವಿಚಾರಣೆಯನ್ನು ನಡೆಸಿದ ವಿರಾಜಪೇಟೆಯ 2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮೋಹನ್ ಪ್ರಭುರವರು ಆರೋಪಿಗಳ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ದಿನಾಂಕ 17/01/2018ರಂದು  ಆರೋಪಿಗಳಾದ ಜೇನುಕುರುಬರ ಬೊಳ್ಳ, ನಾಗಪ್ಪ ಮತ್ತು ದಾದುರವರಿಗೆ ಸಾದಾ ಜೀವಾವಧಿ ಸಜೆ ಮತ್ತು ತಲಾ ರೂ.5,000/-ಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಮಹಾಂತಪ್ಪನವರು ವಾದ ಮಂಡಿಸಿದ್ದರು. 

ಕಳವು ಆರೋಪಿ ಬಂಧನ
                             ದಿನಾಂಕ 08/09/2016ರಂದು ವಿರಾಜಪೇಟೆ ನಿವಾಸಿ ಶಿಬಾ ಎಂಬವರು ಅವರ ಕಾರನ್ನು ವಿರಾಜಪೇಟೆ ನಗರದ  ಸೈಂಟ್ ಆ್ಯನ್ಸ್ ಚರ್ಚಿನ ಮುಂಭಾಗ ನಿಲ್ಲಿಸಿ ಹೋಗಿದ್ದ ಕಾರಿನಿಂದ ಸುಮಾರು 41 ಗ್ರಾಂ ಚಿನ್ನಾಭರಣ, ರೂ.20,000/- ನಗದನ್ನು ಕಳವು ಮಾಡಿದ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ವಿರಾಜಪೇಟೆ ವೃತ್ತ ನಿರೀಕ್ಷಕ ಕುಮಾರ ಆರಾಧ್ಯರವರು ತನಿಖೆಯನ್ನು ಕೈಗೊಂಡಿದ್ದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್‌, ಐಪಿಎಸ್‌ ರವರ ಹಾಗೂ ವಿರಾಜಪೇಟೆ ಪೊಲೀಸ್ ಉಪ ಅಧೀಕ್ಷಕ ನಾಗಪ್ಪರವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ವಿರಾಜಪೇಟೆ ನಗರ ಪೊಲೀಸರ ತಂಡವು ಕೇರಳದ ಕಣ್ಣೂರು ಜಿಲ್ಲೆಯ ಕಾಂಜಲೇರಿಯ ನಿವಾಸಿ ಪಿ.ಕೆ.ಅರ್ಶದ್ ಎಂಬಾತನನ್ನು ದಿನಾಂಕ 19/01/2018ರಂದು ಪತ್ತೆ ಹಚ್ಚಿ ಬಂಧಿಸಿ ಆತನಿಂದ ಕಳವು ಮಾಡಿದ ಚಿನ್ನಾಭರಣ ಮತ್ತು ಇತರ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ. 
                  ವಿರಾಜಪೇಟೆ ವೃತ್ತ ನಿರೀಕ್ಷಕ ಕುಮಾರ ಆರಾಧ್ಯರವರ ನೇತೃತ್ವದಲ್ಲಿ ನಡೆದ ಪತ್ತೆ ಕಾರ್ಯದಲ್ಲಿ ವಿರಾಜಪೇಟೆ ನಗರ ಠಾಣಾ ಪಿಎಸ್‌ಐ ಸಂತೋಷ್ ಕಶ್ಯಪ್, ಸಿಬ್ಬಂದಿಗಳಾದ ಮುನೀರ್, ದೇವಯ್ಯ, ಸುನಿಲ್ ಮತ್ತು ರಜನ್ ಕುಮಾರ್‌ರವರು ಪಾಲ್ಗೊಂಡಿದ್ದು ತಂಡದ ಕಾರ್ಯ ವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್‌ ಐಪಿಎಸ್‌ರವರು ಶ್ಲಾಘಿಸಿದ್ದಾರೆ. 

ಮರ-ಮುಟ್ಟುಗಳಿಗೆ ಬೆಂಕಿ
                         ದಿನಾಂಕ 19/01/2018ರಂದು ನಾಪೋಕ್ಲು ಬಳಿಯ ಕೋಕೇರಿ ನಿವಾಸಿ ಬಿ.ಎನ್.ತೇಜಕುಮಾರ್ ಎಂಬವರು ಮನೆ ಕಟ್ಟುವ ಸಲುವಾಗಿ ಶೇಖರಿಸಿಟ್ಟಿದ್ದ ಸುಮಾರು 2 ಲಕ್ಷ ರೂಗಳಷ್ಟು ಬೆಲೆ ಬಾಳುವ ಮರ-ಮುಟ್ಟುಗಳಿಗೆ ಅವರ ಚಿಕ್ಕಪ್ಪ ಬಿ.ಬಿ.ಕುಟ್ಟಪ್ಪ ಹಾಗೂ ತಂಗವ್ವ ಎಂಬವರು ರಾತ್ರಿ ವೇಳೆ ಬೆಂಕಿ ಹಚ್ಚಿ ನಾಶಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರಿಗೆ ಬೈಕ್ ಡಿಕ್ಕಿ
                           ದಿನಾಂಕ 19/01/2018ರಂದು ಮೂರ್ನಾಡು ಬಳಿಯ ಬಾಡಗ ನಿವಾಸಿ ಸತೀಶ್‌ ರೈ ಎಂಬವರು ಅವರ ನೂತನ ಕಾರಿನಲ್ಲಿ ಪುತ್ತೂರಿನಿಂದ ತಾಳತ್‌ಮನೆ ಮಾರ್ಗವಾಗಿ ಮನೆಗೆ ಬರುತ್ತಿದ್ದಾಗ ಮೇಕೇರಿ ಬಳಿ ಒಂದು ಮೋಟಾರ್ ಬೈಕ್ ಸಂಖ್ಯೆ ಕೆಎ-21-ಆರ್-0083 ನ್ನು ಅದರ ಚಾಲಕ ಹಿಂದಿನಿಂದ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸತೀಶ್‌ ರೈರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಹಾಗೂ ಬೈಕಿಗೆ ಹಾನಿಯುಂಟಾಗಿ ಬೈಕಿನ ಚಾಲಕನಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.