Wednesday, February 28, 2018

ಕಳ್ಳತನಕ್ಕೆ ಪ್ರಯತ್ನ
                 ದಿನಾಂಕ 27-2-2018 ರಂದು ರಾತ್ರಿ 1 ಗಂಟೆಯ ಸಮಯಕ್ಕೆ ಮಡಿಕೇರಿ ನಗರದ ನಿವಾಸಿ ಕನ್ನಂಡ ಅಯ್ಯಪ್ಪ ಎಂಬುವವರ ಮನೆಯ ಕಾಲಿಂಗ್ ಬೆಲ್ ಶಬ್ದ ಆಗಿದ್ದು ಆಗ ಅಯ್ಯಪ್ಪನವರು ಕಿಟಕಿಯಿಂದ ನೋಡಿದಾಗ ಯಾರೋ ಮನೆಯ ಮುಂಭಾಗದ ಫೋರ್ಟಿಕೋದ ಕಬ್ಬಿಣದ ಗ್ರಿಲ್ ಹಾರಿ ಓಡಿ ಹೋಗಿದ್ದು, ನಂತರ ಬೆಳಿಗ್ಗೆ ನೋಡುವಾಗ ಮನೆಯ ಮುಂಭಾಗದ ಫೋರ್ಟಿಕೋದಲ್ಲಿ ಮೆಣಸಿನ ಪುಡಿ ಇರುವುದು ಕಂಡುಬಂದಿದ್ದು, ರಾತ್ರಿ ಯಾರೋ ಕಳ್ಳರು ಕಳ್ಳತನ ಮಾಡಲು ಪ್ರಯತ್ನಿಸಿರಬಹುದೆಂದು ಅಯ್ಯಪ್ಪನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ 
              ಜೀವನದಲ್ಲಿ ಜುಗುಪ್ಸೆಗೊಂಡು ವ್ಯಕ್ತಿಯೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾಮದ ವಾಟೆಕಾಡು ಪೈಸಾರಿಯಲ್ಲಿ ವರದಿಯಾಗಿದೆ. ವಾಟೆಕಾಡು ಪೈಸಾರಿಯ ನಿವಾಸಿ ವಿನೋದ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 27-2-2018 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತನ ಅಣ್ಣ ಶಿವಪ್ಪನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿರುತ್ತದೆ.

ಕೊಲೆಗೆ ಯತ್ನ
              ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಂದಿಗೆ ಜಗಳವಾಡಿ ಕೊಲೆಗೆ ಯತ್ನಿಸಿದ ಘಟನೆ ಕುಶಾಲನಗರದ ಗುಡ್ಡೆಹೊಸೂರು ಎಂಬಲ್ಲಿ ನಡೆದಿದೆ. ದಿನಾಂಕ 27-2-2018 ರಂದು ಗುಡ್ಡೆಹೊಸೂರುವಿನ ನಿವಾಸಿ ಲವನಂಜಪ್ಪ ಎಂಬುವವರು ಗುಡ್ಡೆಹೊಸೂರು ಜಂಕ್ಷನ್ ನಲ್ಲಿ ನಿಂತಿರುವಾಗ ಮಾದಪಟ್ಟಣದ ನಿವಾಸಿ ಮಿಲನ್ ಎಂಬುವವರು ಅಲ್ಲಿಗೆ ಬಂದಿದ್ದು, ಲವನಂಜಪ್ಪನವರು ತನ್ನ ಬಗ್ಗೆ ಆಪಾದನೆ ಮಾಡಿದ್ದೀಯಲ್ಲಾ ಎಂದು ಮಿಲನ್ ರವರನ್ನು ವಿಚಾರಿಸಿದಾಗ ಮಿಲನ್ ರವರು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ಕಡಿದು ಹಣೆಯ ಭಾಗಕ್ಕೆ ಗಾಯಪಡಿಸಿದ್ದು ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಕ್ಷುಲ್ಲಕ ಕಾರಣಕ್ಕೆ ಮಗಳ ಕೊಲೆ
                  ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ತಾಯಿಯೇ ಮಗಳನ್ನು ಕೊಲೆ ಮಾಡಿದ ಘಟನೆ ವಿರಾಜಪೇಟೆ ತಾಲೂಕಿನ ಮಂಚಳ್ಳಿ ಗ್ರಾಮದಲ್ಲಿ ವರದಿಯಾಗಿದೆ. ಮಂಚಳ್ಳಿ ಗ್ರಾಮದ ತೀತಿರ ನಾಣಯ್ಯ @ ದೀಪಕ್ ರವರ ಲೈನ್ ಮನೆಯಲ್ಲಿ ವಾಸವಿರುವ ಪಣಿಯರವರ ಚುಂಡೆ ಎಂಬುವವರು ದಿನಾಂಕ 27-2-2018 ರಂದು ತನ್ನ ಮಗಳಾದ ಪಾಲಿ @ ಗೌರಿಯೊಂದಿಗೆ ಜಗಳವಾಡಿ ಮೊಬೈಲ್ ಚಾರ್ಜರ್ ವಯರ್ ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದು ಈ ಬಗ್ಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.