Sunday, April 22, 2018

ವ್ಯಕ್ತಿ ಆತ್ಮಹತ್ಯೆ
                        ದಿನಾಂಕ 20/04/2018ರಂದು ಕುಶಾಲನಗರ ಬಳಿಯ ಗುಡ್ಡೆಹೊಸೂರು ನಿವಾಸಿ ವಸಂತ ಎಂಬವರು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಮೇಲ್ಛಾವಣಿಗೆ ಲುಂಗಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ವಸಂತ ವಿಪರೀತ ಮದ್ಯ ವ್ಯಸನಿಯಾಗಿದ್ದು ಯಾವುದೋ ಕಾರಣಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಜೀಪು ಕಳ್ಳತನ
                    ಕುಶಾಲನಗರ ಪಟ್ಟಣದ ಕೋಕಾ ಕೋಲಾ ಪಾನೀಯದ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿರುವ ಸಾಹುಲ್ ಹಮೀದ್ ಎಂಬವರು ದಿನಾಂಕ 19/04/2018ರ ಸಂಜೆ ಪಾನೀಯಗಳನ್ನು ಅಂಗಡಿಗಳಿಗೆ ವಿತರಿಸಿ ನಂತರ ಪಾನೀಯಗಳನ್ನು ವಿತರಿಸುವ ಪಿಕ್‌ ಅಪ್ ವಾಹನ ಸಂಖ್ಯೆ ಕೆಎ-45-4379ನ್ನು ನಗರದ ಕೊಹಿನೂರ್ ಹೊಟೆಲಿನ ಬಳಿ ಇರುವ ಗೋದಾಮಿನ ಬಳಿ ನಿಲ್ಲಿಸಿ ವಾಹನದ ಚಾವಿಯನ್ನು ಗೋದಾಮಿನೊಳಗೆ ಇರಿಸಿ ಮನೆಗೆ ಹೋಗಿದ್ದು ನಂತರ ದಿನಾಂಕ 21/04/2018ರಂದು ಪುನಃ ಕೋಕಾ ಕೋಲ ಪಾನೀಯ ವಿತರಣೆ ಮಾಡುವ ಸಲುವಾಗಿ ಗೋದಾಮಿನ ಬಳಿ ಬಂದಾಗ ಪಿಕ್‌ ಅಪ್ ಜೀಪು ಕಾಣಿಸದೇ ಇದ್ದು ಕೂಡಲೇ ಗೋದಾಮಿನ ಬೀಗ ತೆರೆದು ನೋಡಿದಾಗ ಯಾರೋ ಕಳ್ಳರು ಗೋದಾಮಿನ ಮೇಲ್ಛಾವಣಿಯ ಶೀಟನ್ನು ತೆಗೆದು ಒಳ ಪ್ರವೇಶಿಸಿ ಗೋದಾಮಿನೊಳಗಿಟ್ಟಿದ್ದ ಜೀಪಿನ ಚಾವಿಯನ್ನು ತೆಗೆದುಕೊಂಡು ಹೊರಗೆ ನಿಲ್ಲಿಸಿದ್ದ ಜೀಪನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮೊಬೈಲ್ ಫೋನ್ ಕಳವು
                     ನಾಪೋಕ್ಲು ಬಳಿಯ ಬಾವಲಿ ನಿವಾಸಿ ಕೆ.ವಿ.ಮಂದಣ್ಣ ಎಂಬವರು ದಿನಾಂಕ 21/04/2018ರಂದು ನಾಪೋಕ್ಲಿನಲ್ಲಿ ನಡೆಯುತ್ತಿರುವ ಕೌಟುಂಬಿಕ ಹಾಕಿ ಪಂದ್ಯಾಟದಲ್ಲಿ ಭಾಗವಹಿಸಲೆಂದು ಹೋಗಿ ಮೈದಾನದ ಹೊರಗೆ ಬಟ್ಟೆ ಬದಲಾಯಿಸುವಾಗ ಅವರ ಎರಡು ಮೊಬೈಲ್  ಫೋನ್ ಗಳನ್ನು ಪ್ಯಾಂಟಿನ ಜೇಬಿಲ್ಲಿರಿಸಿ ಪ್ಯಾಂಟನ್ನು ಕೆಎ-12-ಎಂಎ-1477 ರ ಓಮಿನಿ ವ್ಯಾನಿನಲ್ಲಿ ಇಟ್ಟು ಆಟವಾಡಲು ಹೋಗಿದ್ದು ಮರಳಿ ಬಂದು ನೋಡುವಾಗ ಯಾರೋ ಕಳ್ಳರು ವ್ಯಾನಿನ ಬಲ ಭಾಗದ ಗಾಜನ್ನು ಕೆಳಕ್ಕೆ ತಳ್ಳಿ ವ್ಯಾನಿನೊಳಗಿಟ್ಟಿದ್ದ ಒಂದು ಓಪೋ ಮತ್ತು ಒಂದು ಸ್ಯಾಮ್‌ಸಂಗ್ ಕಂಪೆನಿಯ ಒಟ್ಟು ಸುಮಾರು ರೂ.45,000/- ಮೌಲ್ಯದ ಎರಡು ಮೊಬೈಲ್ ಫೋನ್‌ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮರಳು ಕಳವು ಪ್ರಕರಣ
                        ದಿನಾಂಕ 21/04/2018ರಂದು ಶ್ರೀಮಂಗಲ ಬಳಿಯ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ಲಕ್ಷ್ಮಣ ತೀರ್ಥ ಹೊಳೆಯಿಂದ ಅಕ್ರಮವಾಗಿ ಮರಳನ್ನು ತೆಗೆಯುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ಮಡಿಕೇರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಕೆ.ಎಸ್.ನಾಗೇಂದ್ರಪ್ಪರವರು ಶ್ರೀಮಂಗಲ ಪಿಎಸ್‌ಐ ಸಣ್ಣಯ್ಯರವರೊಂದಿಗೆ ಸ್ಥಳಕ್ಕೆ ತೆರಳಿದಾಗ ಅಲ್ಲಿ ಕೆಎ-04-ಟಿ-2356ರ ಟ್ರ್ಯಾಕ್ಟರನ್ನು ಬಳಸಿಕೊಂಡು ಕೆಎ-12-ಟಿ-4238ರ ಟ್ರೈಲರಿನಲ್ಲಿ ಸುಮಾರು ರೂ 5,000/- ಮೌಲ್ಯದ ಮರಳನ್ನು ಕಳವು ಮಾಡಿ ತುಂಬಿಸಿದ್ದು ಮರಳು ತುಂಬಿಸುತ್ತಿರುವವರು ಮತ್ತು  ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದು ಟ್ರ್ಯಾಕ್ಟರ್ ಸಮೇತ ಮರಳನ್ನು ವಶಪಡಿಸಿಕೊಂಡು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.