Monday, April 2, 2018

 ಪೊಲೀಸ್ ಧ್ವಜ ದಿನಾಚರಣೆ.


     ಜಿಲ್ಲೆಯ ಕರ್ತವ್ಯನಿರತ ಪೊಲೀಸರು ಸಾರ್ವಜನಿಕರ ದೂರುಗಳನ್ನು ಸರಿಯಾಗಿ ಆಲಿಸಿ ಅರ್ಥೈಸಿಕೊಂಡು ಸಾರ್ವಜನಿಕರಿಗೆ ಸೇವೆಯನ್ನು ನಿಡುವಂತೆ ನಿವೃತ್ತ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಶ್ರೀ ಕೆ.ಎಸ್. ಕುಶಾಲಪ್ಪ ಪೊಲೀಸರಿಗೆ ಕರೆ ನೀಡಿದರು. ಅವರು ಇಂದು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು. 
     ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಸಿಬ್ಬಂದಿಗೆ ಪ್ರತಿ ವರ್ಷ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪರವರ ಸ್ಮರಣಾರ್ಥ ಅವರ ಮಕ್ಕಳಾದ ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪನವರು ನೀಡುತ್ತಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಟ್ರೋಫಿಯನ್ನು ಜಿಲ್ಲೆಯ ಗುಪ್ತದಳದ ಹೆಡ್ ಕಾನ್ಸ್ ಟೇಬಲ್ ಸಿ.ಡಿ. ಆನಂದರವರಿಗೆ ನೀಡಿ ಗೌರವಿಸಲಾಯಿತು. ಜೊತೆಗೆ ಉತ್ತಮ ಕರ್ತವ್ಯ ನಿರ್ವಹಿಸಿದ ಸುಮಾರು 9 ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಸಹ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
     ಕಾರ್ಯಕ್ರಮದಲ್ಲಿ ಕಳೆದ ವರ್ಷ ನಿವೃತ್ತರಾದ ಅಧಿಕಾರಿ ಹಾಗು ಸಿಬ್ಬಂದಿಗಳನ್ನು ಸನ್ಮಾನಿಸುವುದರೊಂದಿಗೆ ವೈದ್ಯಕೀಯ ವೆಚ್ಚದ ಸಹಾಯ ಧನವನ್ನು ಸಹ ವಿತರಿಸಲಾಯಿತು. 

     ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಮಾತನಾಡಿದ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪನವರು ಪ್ರಸಕ್ತ ಹವಾಮಾನ ವೈಪರಿತ್ಯದ ಸಮಯದಲ್ಲಿ ನೀರನ್ನು ಮಿತವಾಗಿ ಬಳಸುವಂತೆ ಕರೆ ನೀಡಿದರಲ್ಲದೆ ಮುಂಬರುವ ವಿಧಾನ ಸಭಾ ಚುನಾವಣೆ ಸಮಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವಂತೆ ಪೊಲೀಸರಿಗೆ ಕಿವಿಮಾತು ಹೇಳಿದರು. 
    ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಐ.ಪಿ.ಎಸ್., ರವರು ಸ್ವಾಗತಿಸಿ ನಿವೃತ್ತ ಪೊಲೀಸ್ ಅಧೀಕ್ಷಕ ಎಂ.ಎ. ಅಪ್ಪಯ್ಯನವರು ವಂದಿಸಿದರು. ಸಮಾರಂಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು ಮತ್ತು ಜಿಲ್ಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು. 
ವಿದ್ಯುತ್ ಸ್ಪರ್ಶದಿಂದ ಮಹಿಳೆ ಸಾವು:

     ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಂಚಿಕಾಡು ಹೊಸೂರು ಬೆಟ್ಟಗೇರಿ ಗ್ರಾಮದಲ್ಲಿರುವ ಎಲಿಜಾ ಕಾಫಿ ಎಸ್ಟೇಟ್ ನಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಮೊಹರ್ ಆಲಿ ಎಂಬವರ ಪತ್ನಿ ಶ್ರೀಮತಿ ಸಹರ್ ಬಾನು ಎಂಬ ಮಹಿಳೆ ದಿನಾಂಕ 1-4-2018 ರಂದು ಸೌದೆ ತರಲು ಕಾಫಿ ತೋಟಕ್ಕೆ ಹೋಗಿದ್ದು ತೋಟದ ಅಂಚಿನಲ್ಲಿದ್ದ ವಿದ್ಯುತ್ ಕಂಬದ ಕೆಳಗೆ ಸೌದೆಗಳನ್ನು ಜೋಡಿಸುತ್ತಿದ್ದ ವೇಳೆ ಕಂಬದಿಂದ ವಿದ್ಯುತ್ ಹರಿದು ಸದರಿ ಮಹಿಳೆ ಸುಟ್ಟು ಸಾವನಪ್ಪಿದ್ದು, ಈ ಸಂಬಂಧ ಮೃತರ ಪತಿ ಮೊಹರ್ ಆಲಿರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯ ಸಾಗಾಟ:

     ದಿನಾಂಕ 31-3-2018 ರಂದು ವಿರಾಜಪೇಟೆ ನಗರ ಪೊಲೀಸ್ ಠಾಣಾ ಸಿಬ್ಬಂದಿ ಪಿ. ಮುನೀರ್ ರವರು ಪೆರುಂಬಾಡಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭ ಆರೋಪಿ ಕಣ್ಣೂರು ಜಿಲ್ಲೆಯ ಆನಪಂದಿ ಅಯ್ಯನ್ ಕುನ್ ಗ್ರಾಮ ದ ನಿವಾಸಿ ಸತೀಶ್ ಕುಮಾರ್ ಎಂಬವರು ತಮ್ಮ ವಾಹನದಲ್ಲಿ ಅಕ್ರಮವಾಗಿ 180 ಎಂ.ಎಲ್ ನ 18 ಟೆಟ್ರಾ ಪ್ಯಾಕೇಟ್ ಗಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯ ಮಾರಾಟ:

     ಗೋಣಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಕೈಕೇರಿ ಗ್ರಾಮದ ಬಿ.ಹೆಚ್. ದೇವರಾಜ್ ಎಂಬವರು ತಮ್ಮ ಮನೆಯ ಮುಂದುಗಡೆ ಇರುವ ಶೆಡ್ಡಿನಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿ ಹೆಚ್. ಸುಬ್ಬಯ್ಯ ಮತ್ತು ಸಿಬ್ಬಂದಿಗಳು ಮಾರಾಟ ಮಾಡಲು ಇಟ್ಟಿದ್ದ ರೂ.2,491/- ಬೆಲೆಬಾಳುವ 90 ಎಂ.ಎಲ್.ನ ಒಟ್ಟು 84 ಟೆಟ್ರಾ ಪ್ಯಾಕೇಟ್ ಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ:

    ವಿರಾಜಪೇಟೆ ತಾಲೋಕು ಹೆಗ್ಗಳ ಗ್ರಾಮದ ಎಂ.ಕೆ. ರವೀಂದ್ರನ್ ಎಂಬವರ ಮಗ ಪ್ರಾಯ 26 ವರ್ಷದ ಸಜೀತ್ ಎಂಬವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 1-4-2018 ರಂದು ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.