Sunday, December 16, 2018

ಬೈಕ್ ಕಳವು
ಮೂರ್ನಾಡು ನಿವಾಸಿ ಶ್ರೀನಿವಾಸ ನಾಯ್ಡು ಎಂಬವರು ದಿನಾಂಕ 05/09/2018ರಂದು ಅವರ ತಾಯಿಯ ಮನೆಯ ಮುಂದೆ ನಿಲ್ಲಿಸಿದ್ದ ಅವರ ಕೆಎ-12-ಇ-7679ರ ಬೈಕನ್ನು ಯಾರೋ ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಯುವತಿ ಆತ್ಮಹತ್ಯೆ
ವಿರಾಜಪೇಟೆ ಸಮೀಪದ ಆರ್ಜಿ ನಿವಾಸಿ ಕುಪ್ಪುಸ್ವಾಮಿ ಎಂಬವರ ಮಗಳು ಅಗನ್ಯ ಎಂಬಾಕೆಯು ದಿನಾಂಕ 15/12/2018ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತೆ ಅಗನ್ಯಳು ಕಾಲು ನೋವು ಹಾಗೂ ಹೊಟ್ಟೆನೋವಿನಿಂದ ಬಳಲುತ್ತಿದ್ದು ವಾಸಿಯಾಗದ ಕಾರಣಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ದೂರು ನೀಡಲಾಗಿದ್ದು ಘಟನೆ ಸಂಬಂಧ ವಿರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
ದಿನಾಂಕ 14/12/2018ರಂದು ಗೋಣಿಕೊಪ್ಪ ಬಳಿಯ ಮಾಯಮುಡಿ ನಿವಾಸಿ ಎನ್‌.ಸಿ.ಮನೋಹರ ಎಂಬವರು ಅವರ ಸಂಬಂಧಿಕರಾದ ವಿಶಾಲಾಕ್ಷಿ ಎಂಬವರ ಕಾರನ್ನು ತೆಗೆದುಕೊಂಡು ಚಾಲಕ ಯೋಗಾನಂದರವರೊಂದಿಗೆ ಗೋಣಿಕೊಪ್ಪದ ಕಡೆಗೆ ಹೋಗುತ್ತಿರುವಾಗ ಬಾಳಾಜಿ ಗ್ರಾಮದ ಬಳಿ ಚಾಲಕ ಯೋಗಾನಂದರವರು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ರಸ್ತೆ ಬದಿಯ ಬರೆಗೆ ಡಿಕ್ಕಿಯಾಗಿ ಹಾನಿಗೊಳಗಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
ದಿನಾಂಕ15/12/2018ರಂದು ಗೋಣಿಕೊಪ್ಪ ಬಳಿಯ ಬಿ.ಶೆಟ್ಟಿಗೇರಿಯ ಕೊಂಗಣ ನಿವಾಸಿ ಕಡೇಮಾಡ ನವೀನ ಎಂಬವರೊಂದಿಗೆ ಅವರ ಸೋದರ ಜಗನ್ ಕಾರ್ಯಪ್ಪ ಹಾಗೂ ತಂದೆ ಮಂದಣ್ಣ ಎಂಬವರು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ದೊಣ್ಣೆಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆ ಆತ್ಮಹತ್ಯೆ
ಗೋಣಿಕೊಪ್ಪ ಬಳಿಯ ಒಂದನೇ ವಿಭಾಗದ ನಿವಾಸಿ ಸತೀಶ ಎಂಬವರ ಪತ್ನಿ ಅನಿತಾ ಎಂಬವರು ದಿನಾಂಕ 14/12/2018ರಂದು ಒಂದನೇ ವಿಭಾಗದ ನಿವಾಸಿ ವಸಂತ ಎಂಬವರಿಗೆ ಸೇರಿದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಪತಿ ಸತೀಶನು ಅತೀವ ಮದ್ಯವ್ಯಸನಿಯಾಗಿದ್ದು ಇದರಿಂದಾಗಿ ನೊಂದ ಅನಿತಾಳು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, December 14, 2018

ರಸ್ತೆ ಅಪಘಾತ
ದಿನಾಂಕ 13/12/2018ರಂದು ವಿರಾಜಪೇಟೆ ಬಳಿಯ ಹೊಸೂರು ಬೆಟ್ಟಗೇರಿ ನಿವಾಸಿ ಪಿ.ಬಿ.ಭರತ್ ಎಂಬವರು ಅವರ ಮೋಟಾರು ಸೈಕಲಿನಲ್ಲಿ ಚೆಟ್ಟಳ್ಳಿ ಬಳಿ ಹೋಗುತ್ತಿರುವಾಗ ಕೆಎಲ್-12-ಕೆ-4768ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಭರತ್‌ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಭರತ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
ದಿನಾಂಕ 13/12/2018ರಂದು ಬೆಂಗಳೂರಿನ ಕೆಂಗೇರಿ ನಿವಾಸಿ ರಾಮನ್ ಎಂಬವರು ಒಂದು ಕಾರಿನಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಮಂಗಳೂರಿನಿಂದ ಮಡಿಕೇರಿಗೆ ಬರುತ್ತಿರುವಾಗ ಮಡಿಕೇರಿ ನಗರದ ಮಂಗಳೂರು ರಸ್ತೆಯ ತಿರುವಿನಲ್ಲಿ ಹಿಂದಿನಿಂದ ಕೆಎ-21-ಪಿ-8081ರ ಕಾರಿನ ಚಾಲಕ ಅಶ್ವಥ್ ಕುಮಾರ್ ಎಂಬವರು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ರಾಮನ್‌ರವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ರಾಮನ್‌ರವರ ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
ದಿನಾಂಕ 12/12/2018ರಂದು ಭಾಗಮಂಡಲ ಬಳಿಯ ಚೆರಂಡೇಟಿ ನಿವಾಸಿ ಬೊಮ್ಮೆನ ಲಕ್ಷ್ಮೀಶ ಎಂಬವರು ಅನಿಲ್ ಎಂಬವರ ಪಿಕ್‌ಅಪ್ ವಾಹನದಲ್ಲಿ ಚೇರಂಬಾಣೆಯಿಂದ ಬಾಡಗದ ಕಡೆಗೆ ಬರುತ್ತಿರುವಾಗ ಬಾಡಗ ಗ್ರಾಮದ ತೊತ್ತಿಯನ ನಾಣಯ್ಯ ಎಂಬವರ ಮನೆಯ ಬಳಿ ಚಾಲಕ ಅನಿಲ್‌ ರವರು ಎದುರಿನಿಂದ ಬರುತ್ತಿದ್ದ ಬೈಕನ್ನು ತಪ್ಪಸುವ ಸಲುವಾಗಿ ಪಿಕ್‌ಅಪ್ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಪಿಕ್‌ಅಪ್ ವಾಹನ ಅನಿಲ್‌ರವರ ನಿಯಂತ್ರಣ ತಪ್ಪಿ ಪಕ್ಕದ ತೋಟದ ಒಳಗೆ ನುಗ್ಗಿದ ಪರಿಣಾಮ ಲಕ್ಷ್ಮೀಶರವರಿಗೆ ಹಾಗೂ ಪಕ್ಕದಲ್ಲಿ ಕುಳಿತಿದ್ದ ಕೂಡಕಂಡಿ ನಾಗರಾಜ್‌ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
ದಿನಾಂಕ 10/12/2018ರಂದು ಕುಶಾಲನಗರ ಬಳಿಯ ಕೂಡುಮಂಗಳೂರು ನಿವಾಸಿಗಳಾದ ಪುಟ್ಟಲಕ್ಷ್ಮಿ ಮತ್ತು ವಿಷ್ಣು ಎಂಬವರು ಒಂದು ಸೈಕಲಿನಲ್ಲಿ ಕೂಡಿಗೆ ಕಡೆಯಿಂದ ಬರುತ್ತಿರುವಾಗ ಸರೋಜಮ್ಮ ಎಂಬವರ ಅಂಗಡಿಯ ಮುಂದಿನ ರಸ್ತೆಯಲ್ಲಿ ಕುಶಾಲನಗರ ಕಡೆಯಿಂದ ಒಂದು ಬೈಕನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಪುಟ್ಟಲಕ್ಷ್ಮಿರವರು ಬರುತ್ತಿದ್ದ ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಪುಟ್ಟಲಕ್ಷ್ಮಿ ಮತ್ತು ವಿಷ್ಣುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
ದಿನಾಂಕ 12/12/2018ರಂದು ಸೋಮವಾರಪೇಟೆ ಬಳಿಯ ಮಾದಾಪುರ ಎ ಎಸ್ಟೇಟಿನ ಕಾರ್ಮಿಕ ಜಾಫರ್ ಆಲಿ ಎಂಬವರು ಸಹ ಕಾರ್ಮಿಕರೊಂದಿಗೆ ಕೆಎ-12-4957ರ ಟ್ರ್ಯಾಕ್ಟರಿಗೆ ಕಾಫಿ ಮೂಟೆಗಳನ್ನು ತುಂಬಿಸಿ ಟ್ರ್ಯಾಕ್ಟರಿನಲ್ಲಿ ಕುಳಿತುಕೊಂಡು ಕಾಫಿಕಣದ ಕಡೆಗೆ ಹೋಗುತ್ತಿರುವಾಗ ಟ್ರ್ಯಾಕ್ಟರಿನ ಚಾಲಕ ಅಬೂಬಕರ್ ಎಂಬವರು ಟ್ರ್ಯಾಕ್ಟರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಜಾಫರ್ ಆಲಿಯವರು ಕಾಫಿ ಮೂಟೆಗಳ ಸಮೇತ ಕೆಳಗೆ ಬಿದ್ದು ಟ್ರ್ಯಾಕ್ಟರಿನ ಚಕ್ರ ತಗುಲಿ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, December 11, 2018

ಹಸು ಕಳವು ಪ್ರಕರಣ
ಸಿದ್ದಾಪುರ ಬಳಿಯ ಚೆನ್ನಯ್ಯನಕೋಟೆ ನಿವಾಸಿ ಹೆಚ್‌.ಆನಂದ ಎಂಬವರು ದಿನಾಂಕ 10/12/2018ರಂದು ಅವರ ಒಂದು ಹಸುವನ್ನು ಪಕ್ಕದ ಅಚ್ಯುತ್ ಎಸ್ಟೇಟಿನ ಗದ್ದೆಯಲ್ಲಿ ಮೇಯಲು ಕಟ್ಟಿ ಹಾಕಿ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಸುಮಾರು ರೂ. 20,000/- ಬೆಲೆಯ ಹಸುವನ್ನು ಯಾರೋ ಕಳವು ಮಾಡಿಕೊಂಡು ಹೋಗಿದ್ದು ಚೆನ್ನಯ್ಯನ ಕೋಟೆಯ ಉಬೈದ್ ಮತ್ತು ಇತರರು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪರಿಚಿತ ವ್ಯಕ್ತಿ ಸಾವು
ದಿನಾಂಕ 10/12/2018ರಂದು ಕುಶಾಲನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಆವರಣದ ಬಾಗಿ ಮರದ ಬುಡದಲ್ಲಿ ಸುಮಾರು 79 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರು ಮಲಗಿದ್ದು ಅಲ್ಲಿಯೇ ಮೃತರಾಗಿರುವುದಾಗಿ ಬಸ್‌ ನಿಲ್ದಾಣದಲ್ಲಿ ಕ್ಯಾಂಟೀನ್‌ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ದಿನೇಶ್‌ ಎಂಬವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ; ವ್ಯಕ್ತಿ ಸಾವು
ದಿನಾಂಕ 09/12/2018ರಂದು ಕುಶಾಲನಗರದ ಗಂಧದಕೋಟೆಯ ಬಳಿ ಕುಶಾಲನಗರದ ಕಡೆಯಿಂದ ಒಂದು ಬೊಲೇರೋ ಜೀಪನ್ನು ಅದರ ಚಾಲಕ ವಾಲ್ನೂರಿನ ಮುತ್ತು ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಗಂಧದ ಕೋಟೆಯ ನಿವಾಸಿ ವೆಂಕಟಪ್ಪ ಎಂಬವರಿಗೆ ಡಿಕ್ಕಿಪಡಿಸಿದ ಪರಿಣಾಮ ತೀವ್ರ ಗಾಯಗೊಂಡ ವೆಂಕಟಪ್ಪನವರನ್ನು ಚಿಕಿತ್ಸೆಗಾಗಿ ಮಡಿಕೇರಿಯ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 10/12/2018ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಯುವಕ ಆತ್ಮಹತ್ಯೆ
ದಿನಾಂಕ 10/12/2018ರಂದು ಸುಂಟಿಕೊಪ್ಪ ಬಳಿಯ ಉಲುಗುಲಿ ಗ್ರಾಮದ ಸಿಸಿಎಲ್ ತೋಟದ ನಿವಾಸಿ ತಿರುಪತಿ ಎಂಬವರ ಮಗ ಗಣಪತಿ ಎಂಬಾತನು ಮನೆಯಲ್ಲಿ ಅಡುಗೆ ಕೋಣೆಯ ಮೇಲ್ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಗಣಪತಿಯು ಚರ್ಮ ರೋಗದಿಂದ ಬಳಲುತ್ತಿದ್ದು ಇದರಿಂದಾಗಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, December 7, 2018

ನಕಲಿ ದಾಖಲೆ : ವಂಚನೆ
ಪೊನ್ನಂಪೇಟೆ ಬಳಿಯ ನಿಟ್ಟೂರು ನಿವಾಸಿ ಮಾಪಂಗಡ ದೇವಯ್ಯ ಎಂಬವರ ತಂದೆ ಪೂವಯ್ಯನವರು ಅದೇ ಗ್ರಾಮದ ನಿವಾಸಿ ಮಲ್ಲೇಂಗಡ ಗಣಪತಿ ಎಂಬವರಿಂದ ಸುಮಾರು 5.84 ಏಕರೆ ಜಾಗವನ್ನು ಸುಮಾರು 1981ನೇ ಸಾಲಿನಲ್ಲಿ ಖರೀದಿಸಿದ್ದು ಇದೀಗ ಮಲ್ಲೇಂಗಡ ಗಣಪತಿ ಮತ್ತು ಅವರ ಮಕ್ಕಳು ಸೇರಿಕೊಂಡು ಕಂದಾಯ ಇಲಾಖೆಯವರೊಡನೆ ಸೇರಿ ಅಕ್ರಮವಾಗಿ ಮಾಪಂಗಡ ಪೂವಯ್ಯನವರ ಜಾಗದ ಪೈಕಿ ಒಂದು ಏಕರೆ ಜಾಗವನ್ನು ಮಲ್ಲೇಂಗಡ ಪೊನ್ನಪ್ಪ ಎಂಬವರ ಹೆಸರಿಗೆ ವರ್ಗಾಯಿಸಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, December 4, 2018

 ಇಲಾಖೆಗೆಳ ಸಮನ್ವಯತೆಯಿಂದ ಮಹಿಳಾ ಮತ್ತು 
ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಬಹುದ -ಲಕ್ಷ್ಮಿಪ್ರಿಯಾ,ಸಿಇಓ
ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿದರೆ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟಬಹುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಲಕ್ಷ್ಮಿ ಪ್ರಿಯಾರವರು ಅಭಿಪ್ರಾಯ ಪಟ್ಟರು. 

                     ಅವರು ಮಡಿಕೇರಿ ನಗರದ ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಯ ವತಿಯಿಂದ  ಮಹಿಳೆಯರ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ, ಬಾಲ್ಯ ವಿವಾಹ, ಬಾಲ ಕಾರ್ಮಿಕರ ಕಾಯ್ದೆ, ಆಂತರಿಕ ದೂರು ಸಮಿತಿ, ಕೌಟುಂಬಿಕ ಆಪ್ತ ಸಮಾಲೋಚನೆ ಮುಂತಾದ ವಿಷಯಗಳ ಬಗ್ಗೆ ಜಿಲ್ಲಾ ಪೊಲೀಸ್ ಸಿಬ್ಬಂದಿಗಳಿಗೆ ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಎಲ್ಲಾ ರೀತಿಯ ಶಿಕ್ಷಣ, ಜಾಗೃತಿ, ಕಾನೂನುಗಳು ಇದ್ದರೂ ಕೂಡ ಇನ್ನೂ ಸಹ ಕೆಲವೆಡೆ ಬಾಲ್ಯ ವಿವಾಹ ನಡೆಯುತ್ತಿರುವುದು ವಿಷಾದಕರ ಎಂದ ಅವರು ಇಂತಹ ಸಾಮಾಜಿಕ ಪಿಡುಗುಗಳನ್ನು ತಡೆಗಟ್ಟಲು ಎಲ್ಲಾ ಇಲಾಖೆಗಳು ಬೇರೆಯವರ ಮೇಲೆ ಜವಾಬ್ದಾರಿಯನ್ನು ಹೊರಿಸುವ ಬದಲು ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವಂತೆ ಕರೆ ನೀಡಿದರು.

                  ಕಾರ್ಯಾಗಾರದ ಪ್ರಾಸ್ತಾವಿಕ ಭಾಷಣ ಮಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ ಪೆನ್ನೇಕರ್‌ ರವರು ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವಲ್ಲಿ ವಿವಿಧ ಇಲಾಖೆಗಳು ಹೇಗೆ ಸಮನ್ವಯೆತೆಯಿಂದ ಕಾರ್ಯ ನಿರ್ವಹಿಸಬೇಕು, ಇಂತಹ ಸಾಮಾಜಿಕ ಪಿಡುಗುಗಳಿಗೆ ಸಂಬಂಧಿಸಿದಂತೆ ಕಾನೂನಿನ ಬಗ್ಗೆ ಅವುಗಳ ಹೊಸ ತಿದ್ದುಪಡಿಗಳ ಬಗ್ಗೆ ಪೊಲೀಸ್‌ ಸಿಬ್ಬಂದಿಗಳಿಗೆ ಸಂಪೂರ್ಣ ಮಾಹಿತಿ ನೀಡುವ ಸಲುವಾಗಿ ಕಾರ್ಯಾಗಾರವನ್ನು ಏರ್ಪಡಿಸಲಾಗಿದ್ದು ಇದರ ಮೂಲಕ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಪರಿಣಾಮಕಾರಿಯಾದ ಕಾರ್ಯ ವಿಧಾನವನ್ನು ಕಂಡುಕೊಳ್ಳುವ ಆಶಯವನ್ನು ವ್ಯಕ್ತಪಡಿಸಿದರು.

                  ಕಾರ್ಯಾಗಾರದ ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ನೂರುನ್ನೀಸಾರವರು ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಹಾಗೂ ಮಹಿಳೆಯರ ಮತ್ತು ಮಕ್ಕಳ ಮೇಲಿನ ಅಪರಾಧ ಕುರಿತಂತೆ ದಂಡ ವಿಧಿ (ತಿದ್ದುಪಡಿ) ಅಧಿನಿಯಮ ಸುಗ್ರೀವಾಜ್ಞೆ - 2018ರ ಬಗ್ಗೆ ವಿಶೇಷ ಉಪನ್ಯಾಸ ನೀಡುತ್ತಾ ಮಹಿಳೆಯರ ಮತ್ತು ಮಕ್ಕಳ ಮೇಲಿನ ಯಾವುದೇ ಅಪರಾಧ ಕೃತ್ಯಗಳು ದಾಖಲಾದಲ್ಲಿ ಪ್ರಥಮ ವರ್ತಮಾನ ವರದಿ ದಾಖಲಿಸುವಲ್ಲಿಂದ ಹಿಡಿದು ಪ್ರಕರಣವು ನ್ಯಾಯಾಯಲಯದಲ್ಲಿ ಇತ್ಯರ್ಥವಾಗುವವರೆಗೆ ಪೊಲೀಸ್ ಇಲಾಖೆಯ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ ಎಂದರಲ್ಲದೆ ವಿವಿಧ ಪ್ರಕರಣಗಳ ಸಂತ್ರಸ್ತ ಮಹಿಳೆಯರಿಗೆ ಸಿಗಬೇಕಾದ ಪರಿಹಾರ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ನೀಡಿದರು. 

                    ಕಾರ್ಯಾಗಾರದಲ್ಲಿ ಜಿಲ್ಲಾ ಆಂತರಿಕ ದೂರು ಸಮಿತಿ ಅಧ್ಯಕ್ಷರು ಹಾಗೂ ವಕೀಲರಾದ ಕೆ.ಎಂ.ಮೀನಾಕುಮಾರಿ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸದಸ್ಯ ಅಬ್ದುಲ್ ಲತೀಫ್, ವಿಶ್ವಸಂಸ್ಥೆಯ ಯುನಿಸೆಫ್ ವಿಭಾಗದ ಜಿಲ್ಲಾ ಸಮಾಲೋಚಕರಾದ ಪ್ರಭಾತ್ ಕಲ್‌ಕುರ, ಜಿಲ್ಲಾ ಆಸ್ಪತ್ರೆಯ ಮನಃಶಾಸ್ತ್ರಜ್ಞರಾದ ಡಾ. ರಮೇಶ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ಮಮ್ತಾಜ್, ಮಕ್ಕಳ ಸಹಾಯವಾಣಿಯ ಜಿಲ್ಲಾ ಸಂಯೋಜಕ ನವೀನ್‌ ಗೌಡ, ಜಿಲ್ಲಾ ಕಾರ್ಮಿಕ ಯೋಜನಾ ನಿರ್ದೇಶಕರಾದ ಸಿರಾಜ್‌ ಅಹಮದ್ ಹಾಗೂ ಸುಂಟಿಕೊಪ್ಪ ಠಾಣೆಯ ಪಿಎಸ್‌ಐ ಎಸ್‌.ಎನ್.ಜಯರಾಂರವರು ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು. 


ಹಲ್ಲೆ ಪ್ರಕರಣ
ದಿನಾಂಕ 03/12/2018ರಂದು ಕೆಎಸ್‌ಆರ್‌ಟಿಸಿ ಸಂಸ್ಥೆಯ ಮಡಿಕೇರಿ ಘಟಕದ ಬಸ್‌ ನಿರ್ವಾಹಕರಾದ ಯೋಗೇಂದ್ರ ಕಾಳಪ್ಪ ಬಡಿಗೇರಿ ಎಂಬವರು ಅವರಿಗೆ ನಿಗದಿಪಡಿಸಲಾದ ಬಸ್ಸಿನ ಚಾಲಕರೊಂದಿಗೆ ಕುಶಾಲನಗರದಿಂದ ಮಡಿಕೇರಿಗೆ ಹೋಗುತ್ತಿರುವಾಗ ಗುಡ್ಡೆಹೊಸೂರಿನಲ್ಲಿ ಮಡಿಕೇರಿಯ ಅಬ್ದುಲ್ ರಹಮಾನ್ ಮತ್ತು ಪ್ರಮೋದ್ ಎಂಬವರು ಬಸ್ಸನ್ನೇರಿದ್ದು ಇಬ್ಬರೂ ಅತೀವ ಪಾನಮತ್ತರಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ತೊಂದರೆ ನೀಡುತ್ತಿದ್ದು ಇದನ್ನು ಆಕ್ಷೇಪಿಸಿದ ಯೋಗೇಂದ್ರ ಕಾಳಪ್ಪರವರಿಗೆ ಅಶ್ಲೀಲ ಶಬ್ದಗಳಿಂದ ಬೈದಿದ್ದು ಮಡಿಕೇರಿ ನಗರದ ಆಸ್ಪತ್ರೆ ಬಳಿ ಬಸ್ಸನ್ನು ನಿಲ್ಲಿಸಿದಾಗ ಅಬ್ದುಲ್ ರಹಮಾನ್ ಮತ್ತು ಪ್ರಮೋದ್‌ರವರು ಬಸ್ಸಿನಿಂದ ಕೆಳಗೆ ಇಳಿದು ಕಲ್ಲಿನಿಂದ ಬಸ್ಸಿನ ಗಾಜಿಗೆ ಎಸೆದ ಪರಿಣಾಮ ಬಸ್ಸಿನಲ್ಲಿದ್ದ ಮಹದೇವ ಎಂಬ ಪ್ರಯಾಣಿಕರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
ದಿನಾಂಕ 03/12/2018ರಂದು ಮಕ್ಕಂದೂರು ನಿವಾಸಿ ಕೆ.ಬಿ.ಮೋಹನ್ ಎಂಬವರು ಅವರ ಸ್ನೇಹಿತರೊಂದಿಗೆ ಮಡಿಕೇರಿ ನಗರದ ಬಸ್‌ ನಿಲ್ದಾಣ ಬಳಿಯ ಮಾರುತಿ ಬಾರಿನಲ್ಲಿ ಊಟ ಮಾಡುತ್ತಿರುವಾಗ ಅಲ್ಲಿಗೆ ಬಂದ ದೇಶಿಕ್, ಕುಶ ಮತ್ತು ಇತರರು ಸೇರಿಕೊಂಡು ಮೋಹನ್‌ರವರ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, December 2, 2018

ವ್ಯಕ್ತಿ ಅಸ್ವಾಭಾವಿಕ ಸಾವು
ದಿನಾಂಕ 30/11/2018ರಂದು ಪೊನ್ನಂಪೇಟೆ ಬಳಿಯ ಬಾಳೆಲೆ ಗ್ರಾಮದ ಕೈನಾಟಿ ಎಂಬಲ್ಲಿನ ನಿವಾಸಿ ಪಂಜರಿಎರವರ ಬಸವ ಎಂಬಾತನು ಮನೆಗೆ ಬರುವಾಗ ಅತೀವ ಮದ್ಯಪಾನ ಮಾಡಿ ಬಂದಿದ್ದು ಈ ಬಗ್ಗೆ ಆತನ ಅಕ್ಕ ಅಮ್ಮಣಿರವರು ಆಕ್ಷೇಪಿಸಿದ ಕಾರಣಕ್ಕೆ ಬಸವನು ಕೋಪಗೊಂಡು ಮನೆಯಿಂದ ಹೋಗಿದ್ದು ದಿನಾಂಕ 01/12/2018ರ ಬೆಳಿಗ್ಗೆಯಾದರೂ ಮನೆಗೆ ಬಾರದ ಕಾರಣ ಎಲ್ಲರೂ ಹುಡುಕಾಡಿದಾಗ ತೋಟದ ಕಾಫಿ ಗಿಡವೊಂದರ ಬಳಿ ಆತನ ಶವವು ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕೊಲೆ ಬೆದರಿಕೆ
ದಿನಾಂಕ 01/12/2018ರಂದು ಬೆಳಿಗ್ಗೆ ಪೊನ್ನಂಪೇಟೆ ಬಳಿಯ ಕೊಟ್ಟಗೇರಿ ನಿವಾಸಿ ಮಾಪಂಗಡ ಅಪ್ಪಣ್ಣ ಎಂಬವರ ತೋಟದಲ್ಲಿ ಎಂ.ಎಂ.ಬೆಳ್ಳಿಯಪ್ಪ ಎಂಬವರು ತೋಟದ ಬೇಲಿಯನ್ನು ಕಡಿಯುತ್ತಿದ್ದುದನ್ನು ಆಕ್ಷೇಪಿಸಿದ ಕಾರಣಕ್ಕೆ ಬೆಳ್ಳಿಯಪ್ಪನವರು ಅಪ್ಪಣ್ಣರವರನ್ನು ನಿಂದಿಸಿ ಮನೆಗೆ ಹೋಗಿ ಕೋವಿ ತಂದು ಗುಂಡು ಹೊಡೆದು ಕೊಲ್ಲುವುದಾಗಿ ಬೆದರಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
ದಿನಾಂಕ 30/11/2018ರ ರಾತ್ರಿ ವೇಳೆ ಸೋಮವಾರಪೇಟೆ ಬಳಿಯ ಯಡವನಾಡು ನಿವಾಸಿ ಜಗದೀಶ್ ಎಂಬವರು ಮನೆಯ ಮೇಲ್ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದ್ದ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
ದಿನಾಂಕ 01/12/2018ರಂದು ಶನಿವಾರಸಂತೆ ಬಳಿಯ ದೊಡ್ಡಳ್ಳಿ ನಿವಾಸಿ ಸುಮಾ ಎಂಬವರು ಅವರ ಪತಿಯೊಡನೆ ಜಗಳವಾಡುತ್ತಿದ್ದು ಈ ಬಗ್ಗೆ ವಿಚಾರಿಸಲು ಬಂದ ಸುಮಾಳ ಅತ್ತೆ ಸರಸ್ವತಿರವರಿಗೆ ಸುಮಾರವರು ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.